ಜೂ.15ರಂದು ಮಿಷನ್ ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆ ಉದ್ಘಾಟನೆ

ಉಡುಪಿ : ಉಡುಪಿ ಜನತೆಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ ಉಡುಪಿ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆಯು ೧೦೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಶತಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವನ್ನು ಜೂ.15ರಂದು ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಈ ಕುರಿತು ಮಾಹಿತಿ ನೀಡಿದರು. ಉದ್ಘಾಟನಾ ಸಮಾ ರಂಭದ ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಲ್ಲಿ ನಡೆಯುವ ರಕ್ತದಾನ ಶಿಬಿರವನ್ನು ಬಡಗಬೆಟ್ಟು ಸೊಸೈಟಿಯ ಜನರಲ್ ಮೆನೇಜರ್ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿರುವರು. ಮಧ್ಯಾಹ್ನ 3 ಗಂಟೆಗೆ ಮಿಷನ್ ಆಸ್ಪತ್ರೆ ಚಾಪೆಲ್‌ನಲ್ಲಿ ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಉಪಾಧ್ಯಕ್ಷೆ ವಂ.ಭಗಿನಿ ಸುಜಾತಾ ನೇತೃತ್ವದಲ್ಲಿ ದೇವರಿಗೆ ಧನ್ಯವಾದ ಸಮರ್ಪಣೆ ನಡೆಯಲಿದೆ ಎಂದರು.
ಲೊಂಬಾರ್ಡ್ ಆಸ್ಪತ್ರೆ ಆವರಣದಲ್ಲಿ ಸಂಜೆ ೫ ಗಂಟೆಗೆ ನಸಿರ್ಂಗ್ ಕಾಲೇಜಿನ ಹೊಸ ಬ್ಲಾಕ್ ಅನ್ನು ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ವಿನಯ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೂರ್ಮರಾವ್, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.
ಶತಮಾನೋತ್ಸವವನ್ನು ವರ್ಷವಿಡೀ ಚಟುವಟಿಕೆಗಳೂಂದಿಗೆ ಆಚರಿಸಲಾಗು ವುದು. ಯೋಜಿತ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಾರ್ಥನಾ ಶಿಬಿರ, ಶೈಕ್ಷಣಿಕ ಸಮ್ಮೇಳನಗಳು, ರಸಪ್ರಶ್ನೆ, ಸಂಗೀತ ಸ್ಪರ್ಧೆಗಳು, ಆಹಾರೋತ್ಸವ, ಉಪಶಾಮಕ ಆರೈಕೆ ಕೇಂದ್ರದ ಉದ್ಘಾಟನೆ ಮತ್ತು ಪ್ಯಾರಾಮೆಡಿಕಲ್ ಕಾಲೇಜಿಗೆ ಹೊಸ ಆವರಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಒಳಗೊಂಡಿವೆ. ೨೦೨೩ರ ಜೂ.೧೫ರಂದು ಆಸ್ಪತ್ರೆಯ ಇತಿಹಾಸದ ಕುರಿತ ಪುಸ್ತಕದ ಬಿಡುಗಡೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
೧೯೨೩ರ ಜೂ.೧೫ ರಂದು ಸ್ಥಾಪಿತವಾದ ಮಿಷನ್) ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಮತ್ತು ಈ ಪ್ರದೇಶದ ಮೊದಲ ತಾಯಿ ಮತ್ತು ಮಕ್ಕಳ ಕೇಂದ್ರೀಕೃತ ಘಟಕವಾಗಿದೆ. ಇದನ್ನು ಡಾ.ಇವಾ ಲೊಂಬಾರ್ಡ್ ಎಂಬ ಯುವ ಸ್ವಿಸ್ ಮಿಷನರಿ ವೈದ್ಯೆ ಬಡ ಮತ್ತು ದೀನದಲಿತರಿಗೆ ಸೇವೆ ಸಲ್ಲಿಸುವ ಉದ್ದೇಶದೊಂದಿಗೆ ಸ್ಥಾಪಿಸಿದ್ದರು. ಮುಂದಿನ ೧೦ವರ್ಷದೊಳಗೆ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶ ಕೂಡ ನಮ್ಮ ಮುಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೀನ್ ಪ್ರಭಾವತಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಸುಜಾತ ಕರ್ಕಡ, ಹಿರಿಯ ವೈದ್ಯಾ ಧಿಕಾರಿ ಡಾ.ಗಣೇಶ್ ಕಾಮತ್, ಪಿಆರ್‌ಓ ರೋಹಿ ರತ್ನಾಕರ್ ಹಾಜರಿದ್ದರು.







