ಜೂ.14ರಂದು ಜ್ಯೇಷ್ಠ ಮಾಸದ ಸೂಪರ್ ಮೂನ್

ಉಡುಪಿ, ಜೂ.೧೩: ಜ್ಯೇಷ್ಠ ಮಾಸದ ಹುಣ್ಣಿಮೆ ದಿನವಾದ ಜೂ.೧೪ರಂದು ಚಂದ್ರ ನಮಗೆ ಸುಮಾರು ೧೫ ಅಂಶ ಗಾತ್ರದಲ್ಲಿ ದೊಡ್ಡದಾಗಿ ೨೫ ಅಂಶ ಹೆಚ್ಚಿನ ಬೆಳಕಿಂದ ಸೂಪರ್ ಮೂನ್ ಕಾಣಸಿಗಲಿದೆ.
ಚಂದ್ರ ಭೂಮಿಯ ಸುತ್ತ ೨೮ ದಿನಗಳಿಗೊಮ್ಮೆ ಸುತ್ತುವ ತಿರುಗಾಟದಲ್ಲಿ ಇಂದು ಭೂಮಿಗೆ ಸಮೀಪ ಅಂದರೆ ಸರಾಸರಿ ದೂರಕ್ಕಿಂತ ಸುಮಾರು ೩೦ ಸಾವಿರ ಕಿ.ಮೀ. ಹತ್ತಿರ ಬರಲಿದೆ. ಚಂದ್ರ ತನ್ನ ದೀರ್ಘ ವೃತ್ತಾಕಾರದ ಪಥದಲ್ಲಿ ೨೮ ದಿನಗಳಿಗೊಮ್ಮೆ ಭೂಮಿಗೆ ಸಮೀಪ ಹಾಗೂ ದೂರದ ಅಪೊಜಿಯಲ್ಲಿ ಬರುವುದು ವಾಡಿಕೆ. ಈ ಪೆರಿಜಿಗೆ ಬಂದಾಗ ಹುಣ್ಣುಮೆಯಾದರೆ ಸೂಪರ್ ಚಂದ್ರ ಕಾಣುತ್ತದೆ.
ಚಂದ್ರ -ಭೂಮಿಗಳ ಸರಾಸರಿ ದೂರ ೩ ಲಕ್ಷ ದ ೮೪ ಸಾವಿರ ಕಿಮೀ. ಆದರೆ ಇಂದು ೩ ಲಕ್ಷದ ೫೭ ಸಾವಿರ ಕಿ.ಮೀ. ಆಗಿರುತ್ತದೆ. ಇಂದು ವೃಶ್ಚಿಕ ರಾಶಿಯ ಸುಂದರ ನಕ್ಷತ್ರ ಜ್ಯೇಷ್ಠ(ಅಂಟಾರಸ್) ಪಕ್ಕದಲ್ಲಿ ಚಂದ್ರ ಉದಯಿಸುತ್ತದೆ. ಹಾಗಾಗಿ ಈ ತಿಂಗಳಿನ ಹೆಸರು ಜ್ಯೇಷ್ಠ ಮಾಸ ಎಂದು ಕರೆಯಲಾಗುತ್ತದೆ.
ಈಗ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಈ ಅಂಟಾರಸ್ ತುಂಬಾ ದೊಡ್ಡದು. ಈ ನಕ್ಷತ್ರ ನಮ್ಮ ಸೂರ್ಯನ ವ್ಯಾಸಕ್ಕಿಂತ ಸುಮಾರು ೭೦೦ ಪಟ್ಟು ದೊಡ್ಡದು. ಹಾಗಾಗಿ ಸೂರ್ಯನಿಗಿಂತ ಕೋಟಿ ಕೋಟಿ ಪಟ್ಟು ದೊಡ್ಡದು ಆಗಿದೆ. ಭೂಮಿಗೆ ಚಂದ್ರ ಹತ್ತಿರ ಬಂದಾಗಲೆಲ್ಲಾ ಸಮುದ್ರದ ಭರತ ಇಳಿತಗಳ ಅಬ್ಬರ ಜೋರು ಆಗಿರುತ್ತದೆ. ಹುಣ್ಣಿಮೆ ಹಾಗೂ ಸೂಪರ್ ಮೂನ್‌ಗಳಿಂದ ಸಮುದ್ರದ ತೆರೆಗಳ ನರ್ತನ ಈ ದಿನ ಜೋರಿರಬಹುದು ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ. ಭಟ್ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







