ವಿದ್ಯಾರ್ಥಿ ಪೂರ್ವಜ್ ಸಾವು ಪ್ರಕರಣ; ಶಾಲಾಡಳಿತದ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ
ಮಂಗಳೂರು : ತಪಾಡಿಯ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ಪೂರ್ವಜ್ ಆತ್ಮಹತ್ಯೆಗೆ ಶಾಲಾ ಆಡಳಿತದ ಅಮಾನವೀಯ. ನಿಯಮಬಾಹಿರ ವರ್ತನೆಗಳೆ ನೇರ ಕಾರಣ. ವಿದ್ಯಾರ್ಥಿ ಸಾವಿಗೆ ಕಾರಣವಾಗಿರುವ ಶಾಲಾ ಆಡಳಿತ ಮಂಡಳಿಯ ಪ್ರಮುಖರನ್ನು ಬಂಧಿಸಿ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ಪೂರ್ವಜ್ ಪೋಷಕರಿಗೆ ನ್ಯಾಯ ಒದಗಿಸಬೇಕು ಎಂದು ಎಸ್‌ಎಫ್‌ಐ ದ ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.
ದ.ಕ.ಜಿಲ್ಲೆಯಲ್ಲಿ ಪ್ರತಿಷ್ಠಿತ ಎಂಬ ಹಣೆಪಟ್ಟಿ ಹೊಂದಿರುವ ಹಲವು ಖಾಸಗಿ ವಸತಿ ಶಾಲೆಗಳು ಕಾರ್ಯಾಚರಿಸು ತ್ತಿವೆ. ಉತ್ತಮ ಫಲಿತಾಂಶದ ಆಸೆ ಹುಟ್ಟಿಸಿ ಹೊರ ಜಿಲ್ಲೆಗಳ ಪೋಷಕರನ್ನು ಇವುಗಳು ಆಕರ್ಷಿಸುತ್ತವೆ. ಉತ್ತಮ ಭವಿಷ್ಯದ ಕನಸುಗಳನ್ನು ಭಿತ್ತಿ ದುಬಾರಿ ಡೊನೇಷನ್, ಫೀಸುಗಳ ಹೆಸರಿನಲ್ಲಿ ಅಕ್ಷರಶಃ ಸುಲಿಗೆಗಳು ಇಂತಹ ಸಂಸ್ಥೆಗಳಲ್ಲಿ ನಡೆಯುತ್ತವೆ. ಕಲಿಕೆಗಾಗಿ ರೂಪಿಸಿರುವ ನಿಯಮ, ಮಾನದಂಡಗಳನ್ನು ಗಾಳಿಗೆ ತೂರಿ ಕಲಿಕೆಯ ಹೆಸರಿನಲ್ಲಿ ವಿಶ್ರಾಂತಿ ರಹಿತವಾಗಿ ಹಿಂಸಾತ್ಮಕ ಅಧ್ಯಯನದಲ್ಲಿ ತೊಡಗಿಸಲಾಗುತ್ತಿದೆ. ಪೋಷಕರ ಭೇಟಿ, ಕನಿಷ್ಠ ಫೋನ್ ಸಂಪರ್ಕಗಳಿಗೆ ಅಮಾನವೀಯ ನಿರ್ಬಂಧಗಳನ್ನು ಹೇರಿ ವಸತಿ ಶಾಲೆಗಳನ್ನು ಜೈಲುಗಳಂತೆ ನಡೆಸಲಾಗುತ್ತಿದೆ. ಇದರ ಪರಿಣಾಮದಿಂದಲೆ ಶಾರದಾ ನಿಕೇತನ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯ ಸಾವು ಉಂಟಾಗಿದೆ. ಹಿಂದೆಯೂ ಇದೇ ರೀತಿ ಹಲವು ವಿದ್ಯಾರ್ಥಿಗಳ ಸಾವು ಜಿಲ್ಲೆಯ ಇಂತಹ ಪ್ರತಿಷ್ಠಿತ ಹಣೆಪಟ್ಟಿಯ ವಸತಿ ಶಾಲೆಗಳಲ್ಲಿ ನಡೆದಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗು ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಕಾರಣ ಈಗ ಶಾರದಾ ನಿಕೇತನದಲ್ಲಿ ಮತ್ತೊರ್ವ ವಿದ್ಯಾರ್ಥಿಯ ದಾರುಣ ಸಾವು ಸಂಭವಿಸಿದೆ. ಇದಕ್ಕೆ ಶಾಲೆಯ ಆಡಳಿತಾಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆಯು ಶಾಲೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ವಿನೀತ್ ದೇವಾಡಿಗ ಒತ್ತಾಯಿಸಿದ್ದಾರೆ.