ಪುತ್ತೂರು: ಮನೆಯ ಬಾಗಿಲು ಒಡೆದು ಚಿನ್ನಾಭರಣ, ಬೈಕ್ ಕಳವು
ಪುತ್ತೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳವು ನಡೆಸಿದ ಘಟನೆ ಸಂಪ್ಯದಲ್ಲಿ ರವಿವಾರ ರಾತ್ರಿ ನಡೆದಿದೆ.
ಸಂಪ್ಯ ನಿವಾಸಿ ದಿ.ಬಾಪಕುಂಞಿ ಎಂಬವರ ಪುತ್ರ ಅದ್ರಾಮ ಎಸ್ ಅವರ ಮನೆಯಿಂದ ಕಳವು ನಡೆದಿದೆ. ಮೆಹಂದಿ ಕಾರ್ಯಕ್ರಮಕ್ಕೆಂದು ಅದ್ರಾಮ ಮತ್ತು ಅವರ ಪತ್ನಿ ರವಿವಾರ ಬೆಳಗ್ಗೆ ತೆರಳಿ ರಾತ್ರಿ ಗಂಟೆ 9.15ಕ್ಕೆ ಮನೆಗೆ ವಾಪಾಸಾಗಿದ್ದರು. ಈ ನಡುವೆ ಕಳ್ಳತನವಾಗಿತ್ತು.
ಮನೆಯ ಬಾಗಿಲಿನ ಒಳ ಭಾಗದ ಚಿಲಕವನ್ನು ಮುರಿದು ಮನೆಯ ಬೆಡ್‌ರೂಮ್‌ನ ಹಾಸಿಗೆಯೊಳಗಿದ್ದ ಕೀಯ ಮೂಲಕ ಕಬ್ಬಿಣದ ಕಪಾಟನ್ನು ತೆರೆದು ಚಿನ್ನದ ಬಳೆಗಳು, ನೆಕ್ಲೆಸ್, ಬೆಂಡೋಲೆ, ವಜ್ರದ ಉಂಗುರ ಸೇರಿದಂತೆ ರೂ. 6,74,600 ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಇದರ ಜೊತೆಗೆ ಮನೆಯ ಅಂಗಳದಲ್ಲಿ ಇಟ್ಟಿದ್ದ ಪಲ್ಸರ್ ಬೈಕ್ ಕೂಡಾ ಕಳವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







