ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ಮತ್ತೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಈಡಿ ಸೂಚನೆ: ವರದಿ

Photo: PTI
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದು ವಿಚಾರಣೆಗೆ ಒಳಪಟ್ಟಿದ್ದ ರಾಹುಲ್ ಗಾಂಧಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ(ಜು.14) ಮತ್ತೆ ಹಾಜರಾಗಲು ಸೂಚಿಸಲಾಗಿದೆ ಎಂದು ಮೂಲಗಳನ್ನುಲ್ಲೇಖಿಸಿ ndtv ವರದಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಈ.ಡಿ. ಸಮನ್ಸ್ ನೀಡಿದ್ದನ್ನು ಪ್ರತಿಪಕ್ಷ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಆಡಳಿತರೂಢ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ನಾಯಕರಿಗೆ ಇಡಿ ನೀಡಿದ್ದ ಸಮನ್ಸ್ ಖಂಡಿಸಿ, ಜಾರಿ ನಿರ್ದೇಶನಾಲಯದ ದಿಲ್ಲಿ ಕಚೇರಿಯ ಹೊರಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ, ಎಲ್ಲಾ ರಾಜ್ಯಗಳಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗಳ ಹೊರಗೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಯೋಜಿಸಿತ್ತು. ಅದರಂತೆ, ದಿಲ್ಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಎಳೆದಾಡಿದ್ದು, ಹಿರಿಯ ನಾಯಕ ಚಿದಂಬರಂ ಅವರ ಪಕ್ಕೆಲುಬು ಮುರಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.





