ಪ್ರತೀ ಸಿಗರೇಟಿನ ಮೇಲೆ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ನಿರ್ಧಾರ

ಟೊರಂಟೊ, ಜೂ.13: ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಂದೇಶವನ್ನು ಸಾಮಾನ್ಯವಾಗಿ ಸಿಗರೇಟಿನ ಪ್ಯಾಕಿನ ಮೇಲೆ ಮುದ್ರಿಸಲಾಗುತ್ತದೆ. ಆದರೆ ಪ್ರತೀ ಸಿಗರೇಟಿನ ಮೇಲೆ ಈ ಸಂದೇಶ ಮುದ್ರಿಸುವ ಮೂಲಕ ಈ ರೀತಿಯ ಕ್ರಮ ಕೈಗೊಂಡ ಮೊದಲ ದೇಶವಾಗಿ ಕೆನಡಾ ಗುರುತಿಸಿಕೊಳ್ಳಲಿದೆ.
ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುವ ಗ್ರಾಫಿಕ್ ಫೋಟೋವನ್ನು ಪ್ಯಾಕೆಟ್ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸಿದ್ದ ಕೆನಡಾ ಈಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಪ್ಯಾಕೆಟ್ ಮೇಲಿನ ಸಂದೇಶಗಳು ತಮ್ಮ ಪ್ರಭಾವವನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ಆದ್ದರಿಂದ ಪ್ರತೀ ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸುವುದರಿಂದ ಅಗತ್ಯದ ಸಂದೇಶ ಜನರನ್ನು ತಲುಪಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಕೆನಡಾದ ಮಾನಸಿಕ ಆರೋಗ್ಯ ಮತ್ತು ದುಶ್ಚಟ ಸಮಸ್ಯೆಗೆ ಸಂಬಂಧಿಸಿದ ಇಲಾಖೆಯ ಸಚಿವೆ ಕ್ಯಾರೊಲಿನ್ ಬೆನ್ನೆಟ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಪ್ರಸ್ತಾವಿತ ಬದಲಾವಣೆಗೆ ಸಂಬಂಧಿಸಿ ಸಮಾಲೋಚನಾ ಅವಧಿ ಜೂನ್ 11ರಿಂದ ಜಾರಿಗೆ ಬಂದಿದ್ದು ನೂತನ ಕಾನೂನು 2023ರ ಮಧ್ಯಭಾಗದಲ್ಲಿ ಜಾರಿಗೆ ಬರಲಿದೆ ಎಂದವರು ಹೇಳಿದ್ದಾರೆ. ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕೆನಡಾ ಕ್ಯಾನ್ಸರ್ ಸೊಸೈಟಿಯ ಅಧಿಕಾರಿ ರಾಬ್ ಕನ್ನಿಂಗ್ಹಾಮ್, ನೇರವಾಗಿ ಸಿಗರೇಟಿನ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸುವ ಪ್ರಕ್ರಿಯೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಲಿದೆ. ಅಲ್ಲದೆ ಇದು ಹೆಚ್ಚಿನ ಪರಿಣಾಮ ಬೀರಲಿದೆ. ಪ್ರತೀ ಧೂಮಪಾನಿಗೂ ಸಿಗರೇಟಿನ ಪ್ರತಿಯೊಂದು ಧಮ್ ಎಳೆಯುವಾಗಲೂ ಇದು ನೆನಪಿಗೆ ಬರಲಿದೆ ಎಂದವರು ಹೇಳಿದ್ದಾರೆ.