ಸಿಇಟಿ ಪರೀಕ್ಷೆಗೂ ವಸ್ತ್ರಸಂಹಿತೆ ಕಡ್ಡಾಯ: ಕೆಇಎ

ಬೆಂಗಳೂರು: ಜೂ.16ರಿಂದ 18ರವರೆಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೊಸ ವಸ್ತ್ರಸಂಹಿತೆ ಪಾಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ.
ಇತರ ಸಂಸ್ಥೆಗಳ ಸಹಯೋಗದಲ್ಲಿ ಪ್ರೆಸಿಡೆನ್ಸಿ ವಿವಿ ಆಯೋಜಿಸಿದ್ದ ಸಿಇಟಿ ಪ್ರೆಪ್ ಮಾಸ್ಟರ್ ವೆಬಿನಾರ್ ನಲ್ಲಿ ಭಾಗವಹಿಸಿದ್ದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್, ಹೊಸ ವಸ್ತ್ರಸಂಹಿತೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶ ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಪೂರ್ಣ ತೋಳಿನ ಅಂಗಿ, ತಲೆ ಮತ್ತು ಕಿವಿಗಳನ್ನು ಮುಚ್ಚುವ ಬಟ್ಟೆ, ವಾಚುಗಳು, ಆಭರಣ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಪೆನ್ಸಿಲ್‍ಗಳನ್ನು ಒಯ್ಯಲು ಅವಕಾಶ ಇರುವುದಿಲ್ಲ.
"ವಾಚುಗಳನ್ನು ಒಯ್ಯಲು ಅವಕಾಶ ನೀಡದ ಬಗ್ಗೆ ಆತಂಕಗಳು ಇವೆ. ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲ ಆಗದಂತೆ ಎಲ್ಲ ಕೇಂದ್ರಗಳು ಕಡ್ಡಾಯವಾಗಿ ಗಡಿಯಾರಗಳನ್ನು ಹೊಂದುವಂತೆ ಸೂಚಿಸಲಾಗಿದೆ. ಇದರ ಜತೆಗೆ ವಿದ್ಯಾರ್ಥಿಗಳು ಬೆಲ್ ಸಮಯದ ಬಗ್ಗೆ ತಿಳಿದುಕೊಳ್ಳಲು ಸಲಹೆ ಮಾಡಲಾಗಿದ್ದು, ಇದು ಪರೀಕ್ಷೆ ಹೇಗೆ ಪ್ರಗತಿಯಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಲಿದೆ ಎಂದು ವಿವರಿಸಿದರು.
ಅಸ್ವಸ್ಥ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸಿ ಆಗಮಿಸಿದರೆ ಅದನ್ನು ಮಡಚುವಂತೆ ಸೂಚಿಸಲಾಗುವುದು ಅಥವಾ ಪರೀಕ್ಷಾ ಕೇಂದ್ರದಿಂದಲೇ ಟಿ-ಶರ್ಟ್ ನೀಡಲು ವ್ಯವಸ್ಥೆ ಮಾಡಲಾಗುವುದು. ಆದರೆ ಕೋವಿಡ್ ಕಾಲಘಟ್ಟದಲ್ಲಿ ಇದು ಅಪೇಕ್ಷಣೀಯವಲ್ಲ ಎಂದು ಅವರು ಸಲಹೆ ಮಾಡಿದರು.







