ರಾಹುಲ್ ಗಾಂಧಿ ವಿರುದ್ಧ ಈಡಿ ತನಿಖೆ ಅವರ ಧ್ವನಿ ಅಡಗಿಸುವ ಪ್ರಯತ್ನ: ಸುರ್ಜೆವಾಲಾ

Photo:twitter
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ(ಈಡಿ)ಎರಡನೇ ದಿನ ವಿಚಾರಣೆಗೆ ಒಳಪಡಿಸುವ ಮೊದಲು ಕಾಂಗ್ರೆಸ್ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ತನಿಖಾ ಸಂಸ್ಥೆಯನ್ನು "ಚುನಾವಣಾ ನಿರ್ವಹಣಾ ಇಲಾಖೆ" ಯಾಗಿ ಬಳಸಲಾಗುತ್ತಿದೆ. ರಾಹುಲ್ ಗಾಂಧಿ ವಿರುದ್ಧ ಈಡಿ ತನಿಖೆ ಅವರ ಧ್ವನಿ ಅಡಗಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ "ಕಾಲಾನುಕ್ರಮ ಅರ್ಥಮಾಡಿಕೊಳ್ಳಿ" ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಕೇಂದ್ರಕ್ಕೆ ನಾಲ್ಕು ಪ್ರಶ್ನೆಗಳನ್ನು ಹಾಕಿದರು.
"ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ -- ರಾಹುಲ್ ಗಾಂಧಿ ಅವರು ಜನರ ಪರ ಧ್ವನಿಯನ್ನು ಎತ್ತುವ ಕಾರಣದಿಂದ ಬಿಜೆಪಿ ಅವರ ಮೇಲೆ ದಾಳಿ ಮಾಡಿದೆ" ಎಂದು ಸುರ್ಜೆವಾಲಾ ಹೇಳಿದರು.
ಕೇಂದ್ರದ ನಿರ್ಧಾರಗಳ ಬಗ್ಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಾಡಿದ್ದ ಟೀಕೆಗಳನ್ನು ಸುರ್ಜೆವಾಲಾ ಪಟ್ಟಿ ಮಾಡಿದರು.
ಚೀನಾ ನಮ್ಮ ಪ್ರದೇಶವನ್ನು ವಶಪಡಿಸಿಕೊಳ್ಳುವುದು, ಏರುತ್ತಿರುವ ಹಣದುಬ್ಬರ, ಇಂಧನ ಬೆಲೆ ಏರಿಕೆ, ನಿರುದ್ಯೋಗ, ಧಾರ್ಮಿಕ ಪ್ರತೀಕಾರದಂತಹ ವಿಷಯಗಳ ಬಗ್ಗೆ ಅವರು ಯಾವಾಗಲೂ ಮೋದಿ ಸರಕಾರವನ್ನು ಪ್ರಶ್ನಿಸಿದ್ದಾರೆ. ಲಾಕ್ಡೌನ್ಗಳ ಸಮಯದಲ್ಲಿ ವಲಸೆ ಕಾರ್ಮಿಕರ ಅವಸ್ಥೆ, ರೈತರ ಪ್ರತಿಭಟನೆಗಳು ಹಾಗೂ ಬಿಜೆಪಿಯಿಂದ ಕೋಮುಗಲಭೆ ನಡೆಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಕೇಂದ್ರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದರು ಎಂದು ಸುರ್ಜೆವಾಲಾ ಹೇಳಿದರು.
ಕೇಂದ್ರ ಸರಕಾರವು ರಾಹುಲ್ ಗಾಂಧಿಗೆ ಭಯಪಡುತ್ತದೆ ಹಾಗೂ ಇದು ಅವರನ್ನು ಗುರಿಯಾಗಿಸಲು ಏಕೈಕ ಕಾರಣವಾಗಿದೆ ಎಂದರು.
ಬಿಜೆಪಿಯು ಸುಳ್ಳುಗಳನ್ನು ಹರಡಲು ಹಾಗೂ ಪ್ರತಿಪಕ್ಷಗಳ ಮೇಲೆ ದಾಳಿ ಮಾಡಲು ಮಾಧ್ಯಮ ಮತ್ತು 'ವಾಟ್ಸಾಪ್ ಯನಿವರ್ಸಿಟಿಯನ್ನು ಬಳಸುತ್ತಿದೆ. ಕೇಂದ್ರ ಸರಕಾರವು ರಾಹುಲ್ ಗಾಂಧಿಯವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಅವರ ಪ್ರಶ್ನೆಗಳು ಆಡಳಿತಕ್ಕೆ ತುಂಬಾ ಕಿರಿಕಿರಿ ಉಂಟು ಮಾಡಿದೆ ಎಂದು ಸುರ್ಜೆವಾಲಾ ಹೇಳಿದರು.
ರಾಹುಲ್ ಗಾಂಧಿಯವರ "ನಿರಂತರ ಒತ್ತಡ" ದಿಂದಾಗಿ ಕೇಂದ್ರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿತು ಹಾಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿತು. ಕಟ್ಟುನಿಟ್ಟಾದ ಲಾಕ್ಡೌನ್ಗಳಿಂದ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ವಲಸೆ ಕಾರ್ಮಿಕರ ಪರವಾಗಿ ನಿಂತರು. ರೈತರನ್ನು ಬಿಜೆಪಿ "ಭಯೋತ್ಪಾದಕರು" ಎಂದು ಕರೆಯುವಾಗ ಸಾರ್ವಜನಿಕವಾಗಿ ರೈತರಿಗೆ ಬೆಂಬಲ ನೀಡಿದ್ದರು ಹಾಗೂ ರೈತರ ಪ್ರತಿಭಟನೆಯಲ್ಲಿ ಭಾಗಿಯಾದರು "ಕೋಮು ಅಶಾಂತಿಯನ್ನು ಸೃಷ್ಟಿಸುವ ಬಿಜೆಪಿ ವಿರುದ್ಧ ರಾಹುಲ್ ಮಾತ್ರ ಮಾತನಾಡುತ್ತಾರೆ" ಎಂದು ಸುರ್ಜೆವಾಲಾ ಹೇಳಿದರು.
ED probe against Rahul Gandhi is an attempt to muzzle his voice as he has always questioned Modi govt on issues like China capturing our territory, inflation, fuel price hike, unemployment, religious vendetta...He is being constantly attacked: Randeep Surjewala, Congress pic.twitter.com/obU9i4Mv6r
— ANI (@ANI) June 14, 2022







