"ನೋಟಿಸ್ ಜಾರಿಗೊಳಿಸದೆ ನೆಲಸಮ ಕಾರ್ಯಾಚರಣೆ ನಡೆಸಬಾರದೆಂದು ಉ.ಪ್ರ. ಸರಕಾರಕ್ಕೆ ಸೂಚಿಸಿ"
ಜಮೀಯತ್ ಉಲಾಮದಿಂದ ಸುಪ್ರೀಂಗೆ ಅಪೀಲು

ಹೊಸದಿಲ್ಲಿ: ನೋಟಿಸ್ ನೀಡದೆ ಯಾವುದೇ ನೆಲಸಮ ಕಾರ್ಯಾಚರಣೆ ನಡೆಸಬಾರದು ಎಂದು ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಜಮೀಯತ್ ಉಲಾಮ-ಇ-ಹಿಂದ್ ಎಂಬ ಸಂಘಟನೆ ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದೆ.
ಯಾವುದೇ ಪ್ರಕರಣದ ಆರೋಪಿಗಳ ಮನೆಗಳನ್ನು ಈ ರೀತಿ ನೆಲಸಮಗೊಳಿಸುವ ಅವಕಾಶ ದೇಶದ ಕಾನೂನಿನಡಿ ಇಲ್ಲದೇ ಇದ್ದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂತಹ ಕ್ರಮಕೈಗೊಳ್ಳಲಾಗುತ್ತಿದೆಯಲ್ಲದೆ ಬಿಜೆಪಿಯ ನಾಯಕರು ಪ್ರವಾದಿ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾದವರ ವಿರುದ್ಧವೂ ಇಂತಹುದೇ ಕಾರ್ಯಾಚರಣೆ ಕಳೆದ ವಾರದಿಂದ ರಾಜ್ಯದಲ್ಲಿ ನಡೆಯುತ್ತಿದೆ.
ಉತ್ತರ ಪ್ರದೇಶದಲ್ಲಿ ಈ ರೀತಿ ಮನೆಗಳನ್ನು ನೆಲಸಮಗಳಿಸಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜಮೀಯತ್ ಉಲಾಮ ತನ್ನ ಅರ್ಜಿಯಲ್ಲಿ ಕೋರಿದೆ.
ಉತ್ತರ ಪ್ರದೇಶ ಸರಕಾರವು ಕಾನ್ಪುರ್ ಜಿಲ್ಲೆಯಲ್ಲಿ ಯಾವುದೇ ಅಪರಾಧ ಪ್ರಕರಣದ ಆರೋಪಿಗಳ ಗೃಹ ಅಥವಾ ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ ಇಂತಹ ಕ್ರಮಕೈಗೊಳ್ಳದೇ ಇರುವಂತೆ ನೋಡಿಕೊಳ್ಳಬೇಕು, ಜಹಾಂಗೀರಪುರಿ ನೆಲಸಮ ಕಾರ್ಯಾಚಾರಣೆಗೆ ಸಂಬಂಧಿಸಿದ ಪ್ರಕರಣ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಾಗುತ್ತಿರುವಂತಹ ಸಂದರ್ಭದಲ್ಲಿ ಸರಕಾರದ ಇಂತಹ ಕ್ರಮ ಆತಂಕಕಾರಿ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಇಂತಹ ಕ್ರಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ ಹಾಗೂ ದೇಶದ ನ್ಯಾಯದಾನ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.