"ಉತ್ತರ ಪ್ರದೇಶ ಆಡಳಿತದ ಅತಿರೇಕದ ಕ್ರಮದ ಕುರಿತಂತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು"
ನಿವೃತ್ತ ನ್ಯಾಯಮೂರ್ತಿಗಳು, ವಕೀಲರುಗಳಿಂದ ಪತ್ರ

Photo: PTI
ಹೊಸದಿಲ್ಲಿ,ಜೂ.14: ಉತ್ತರ ಪ್ರದೇಶ ಆಡಳಿತವು ಸಂವಿಧಾನ ಮತ್ತು ಕಾನೂನನ್ನು ಅಣಕಿಸುತ್ತಿದೆ ಎಂದು ಆರೋಪಿಸಿರುವ 12 ಗಣ್ಯರು, ಪ್ರವಾದಿ ಮುಹಮ್ಮದ್ರ ಕುರಿತು ಬಿಜೆಪಿ ನಾಯಕರ ನಿಂದನಾತ್ಮಕ ಹೇಳಿಕೆಗಳನ್ನು ಖಂಡಿಸಿ ಪ್ರತಿಭಟಿಸುತ್ತಿರುವ ಮುಸ್ಲಿಮ್ ನಾಗರಿಕರ ವಿರುದ್ಧ ಅಧಿಕಾರಿಗಳ ಹಿಂಸಾಚಾರ ಮತ್ತು ದಮನಕ್ಕೆ ಪ್ರತಿಕ್ರಿಯಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂವರು ಮಾಜಿ ನ್ಯಾಯಾಧೀಶರು ಸೇರಿದ್ದಾರೆ.
ಪ್ರತಿಭಟನಾಕಾರರ ಮನೆಗಳ ನೆಲಸಮ ಕಾರ್ಯಾಚರಣೆಯನ್ನು ‘ಸ್ವೀಕಾರಾರ್ಹವಲ್ಲದ,ಕಾನೂನಿನ ಆಡಳಿತದ ಬುಡಮೇಲು ಕೃತ್ಯ’ಎಂದು ಬಣ್ಣಿಸಿರುವ ಪತ್ರವು,ಇದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿದೆ.
ಜೂ.14ರಂದು ಬರೆಯಲಾಗಿರುವ ಪತ್ರಕ್ಕೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಬಿ.ಸುದರ್ಶನ ರೆಡ್ಡಿ,ವಿ.ಗೋಪಾಲ ಗೌಡ ಮತ್ತು ಎ.ಕೆ.ಗಂಗೂಲಿ ಅವರ ಜೊತೆಗೆ ಉಚ್ಚ ನ್ಯಾಯಾಲಯಗಳ ಮೂವರು ಮಾಜಿ ನ್ಯಾಯಾಧೀಶರು ಮತ್ತು ಆರು ಹಿರಿಯ ವಕೀಲರು ಸಹಿ ಹಾಕಿದ್ದಾರೆ.
ಪೊಲೀಸರು ಮತ್ತು ಅಭಿವೃದ್ಧಿ ಪ್ರಾಧಿಕಾರಗಳು ಕಾರ್ಯಾಚರಿಸಿದ ಸಂಘಟಿತ ವಿಧಾನವು ನೆಲಸಮ ಕಾರ್ಯಾಚರಣೆಗಳು ಸಾಮೂಹಿಕ ನ್ಯಾಯಾಂಗೇತರ ಶಿಕ್ಷೆಯ ರೂಪವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿ ಯುವಕರನ್ನು ಲಾಠಿಗಳಿಂದ ಥಳಿಸುತ್ತಿರುವ, ಯಾವುದೇ ನೋಟಿಸ್ ನೀಡದೇ ಪ್ರತಿಭಟನಾಕಾರರ ಮನೆಗಳನ್ನು ಧ್ವಂಸಗೊಳಿಸುತ್ತಿರುವ ಮತ್ತು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪ್ರತಿಭಟನಾಕಾರರನ್ನು ಪೊಲೀಸರು ಬೆನ್ನಟ್ಟಿ ಥಳಿಸುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು,ದೇಶದ ಆತ್ಮಸಾಕ್ಷಿಯನ್ನು ಕದಡುತ್ತಿವೆ ಎಂದು ಈ ಗಣ್ಯರು ಪತ್ರದಲ್ಲಿ ಹೇಳಿದ್ದಾರೆ.
‘ಅನುಕರಣೀಯ’ ಕ್ರಮವನ್ನು ಅನುಮೋದಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ನೀಡಿರುವ ಹೇಳಿಕೆಗಳು ಪ್ರತಿಭಟನಾಕಾರರಿಗೆ ಚಿತ್ರಹಿಂಸೆ ನೀಡಲು ಪೊಲೀಸರಿಗೆ ಇನ್ನಷ್ಟು ಧೈರ್ಯವನ್ನು ತುಂಬಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇಂತಹ ಸಂಕಷ್ಟದ ಸಮಯಗಳಲ್ಲಿ ನ್ಯಾಯಾಂಗವು ಸತ್ವಪರೀಕ್ಷೆಗೊಳಪಡುತ್ತದೆ ಎಂದು ಹೇಳಿರುವ ಪತ್ರವು,ನ್ಯಾಯಾಂಗವು ಈ ಹಿಂದೆ ಜನರ ಹಕ್ಕುಗಳ ಪಾಲಕನಾಗಿ ವಿಶಿಷ್ಟವಾಗಿ ಹೊರಹೊಮ್ಮಿದೆ ಎಂದು ಬೆಟ್ಟು ಮಾಡಿದೆ. 2020ರಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ನಡೆದುಕೊಂಡೇ ಊರಿಗೆ ಮರಳುವ ಅನಿವಾರ್ಯತೆಗೆ ಸಿಲುಕಿದ್ದಾಗ ಮತ್ತು ಪೆಗಾಸಸ್ ಸ್ಪೈವೇರ್ ವಿಷಯದಲ್ಲಿ ಸವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಂಡಿದ್ದ ನಿದರ್ಶನಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಹಾಗೂ ಭಾರತೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷ ನ್ಯಾ.ಎ.ಪಿ.ಶಾ, ಮದ್ರಾಸ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೆ.ಚಂದ್ರು, ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮುಹಮ್ಮದ್ ಅನ್ವರ್,ಹಿರಿಯ ವಕೀಲರಾದ ಮಾಜಿ ಕಾನೂನು ಸಚಿವ ಶಾಂತಿಭೂಷಣ,ಪ್ರಶಾಂತ ಭೂಷಣ,ಇಂದಿರಾ ಜೈಸಿಂಗ್,ಚಂದರ್ ಉದಯ ಸಿಂಗ್,ಶ್ರೀರಾಮ ಪಂಚು ಮತ್ತು ಆನಂದ ಗ್ರೋವರ್ ಅವರೂ ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.







