ಶಿಕ್ಷಣ ಸಚಿವರ ವಿರುದ್ಧ ದೋಷಾರೋಪಣಾ ಪಟ್ಟಿ ಹೊರಡಿಸಿದ ಬಹುತ್ವ ಕರ್ನಾಟಕ
ರಾಜ್ಯದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕಸಿದುಕೊಂಡ ಆರೋಪ

ಬೆಂಗಳೂರು, ಜೂ.14: ರಾಜ್ಯದ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಕಸಿದುಕೊಂಡ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಅವರು ಆಗ್ರಹಿಸಿದರು.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಣವು ಏಳು ದಶಕಗಳಲ್ಲೇ ಮಹಾವೈಫಲ್ಯವನ್ನು ಕಂಡಿದೆ. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೇರ ಹೊಣೆಗಾರರಾಗಿದ್ದು, ಅಂತರ್‍ರಾಷ್ಟ್ರೀಯ ಕಾನೂನು, ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಹಾಗೂ ಸಂವಿಧಾನ ಆಶಯಗಳನ್ನು ವ್ಯವಸ್ಥಿತವಾಗಿ ಉಲ್ಲಂಘನೆ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಭಾರತವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿದರು.
ಪಠ್ಯಪರಿಷ್ಕರಣಾ ಹಗರಣದಿಂದಾಗಿ ಇದುವರೆಗೂ ಮಕ್ಕಳಿಗೆ ಪಠ್ಯಪುಸ್ತಕ ನೀಡಿಲ್ಲ. ಆದೇಶ ಇಲ್ಲದಿದ್ದರೂ, ಪರಿಷ್ಕರಣೆಗ ಕೈ ಹಾಕಲಾಗಿದೆ. ಹಾಗಾಗಿ ಒಪ್ಪದ ಪಠ್ಯವನ್ನು ಸೇರಿಸಲಾಗಿದೆ. ಶಿಕ್ಷಣ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಹುತ್ವ ಕರ್ನಾಟಕದ ಮುಖ್ಯಸ್ಥೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ರಾಜ್ಯಾದ್ಯಂತ ಎಲ್ಲಾ ಸರಕಾರಿ ಶಾಲೆಗಳಲ್ಲಿ ವಾರದಲ್ಲಿ 5 ದಿನ ಮೊಟ್ಟೆಯನ್ನು ನೀಡಬೇಕು. ಎಲ್ಲಾ ಮಕ್ಕಳು ಶಾಲೆಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಸರಕಾರವು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಕಲಿಕೆಯ ಅಂತರವನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡಿನಂತೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ವಿದ್ಯಾರ್ಥಿನಿಯರು ಕಿರುಕುಳಕ್ಕೆ ಒಳಗಾಗದಂತೆ ಮತ್ತು ಅವರ ಶಿಕ್ಷಣದ ಹಕ್ಕು ಮತ್ತು ಇತರ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳಬೇಕು. ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಎಂದು ಅವರು ಸರಕಾರಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ ಶೇ.32.5ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 9 ರಿಂದ 19 ವರ್ಷದ ಮಕ್ಕಳಲ್ಲಿ ಶೇ.17.2ರಷ್ಟು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ದತ್ತಾಂಶವನ್ನು ಕೇಂದ್ರ ಸರಕಾರದ ನೀತಿ ಆಯೋಗವೇ ಪ್ರಕಟಿಸಿದ್ದು, ಇದು ಕೋವಿಡ್‍ನಿಂದ ಉಂಟಾದ ಬಿಕ್ಕಟ್ಟಾಗಿದೆ. ಸರಕಾರವು ಕಲಿಕೆ ಮತ್ತು ಅಪೌಷ್ಟಿಕತೆಯ ಬಿಕ್ಕಟ್ಟನ್ನು ಸರಿಪಡಿಸುವಲ್ಲಿ ವಿಫಲವಾಗಿದೆ.
-ನಿರಂಜನಾರಾಧ್ಯ ವಿ.ಪಿ., ಅಭಿವೃದ್ಧಿ ಶಿಕ್ಷಣ ತಜ್ಞ
‘ಬಹುತ್ವ ಕರ್ನಾಟಕ’ ಹೊರಡಿಸಿರುವ ಚಾರ್ಜ್‍ಶೀಟ್‍ನಲ್ಲಿ ಏನಿದೆ?
ಚಾರ್ಜ್‍ಶೀಟ್‍ನಲ್ಲಿ ಶಾಲಾ ಮಕ್ಕಳನ್ನು ಸಂತ್ರಸ್ತರನ್ನಾಗಿ ಉಲ್ಲೇಖಿಸಿದ್ದು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ ಇಲ್ಲಿಯವರೆಗೆ ಸಚಿವರು ಉಲ್ಲಂಘಿಸಿರುವ ಕಾನೂನುಗಳ ಪಟ್ಟಿಯನ್ನು ನಮೂದಿಸಲಾಗಿದೆ.
ಕೋವಿಡ್ ಸೋಂಕಿನಿಂದ ಉಂಟಾಗಿರುವ ಕಲಿಕಾ ಕುಂಠಿತವನ್ನು ಸರಿಪಡಿಸಲು ವಿಫಲವಾಗಿದ್ದು, ಈ ನಿಟ್ಟಿನಲ್ಲಿ ಸಚಿವ ಬಿ.ಸಿ. ನಾಗೇಶ್ ಅವರು ಭಾರತ ಸಂವಿಧಾನದ ಅನುಚ್ಚೇಧ 14, 15, 21, 21ಎ, 24, 39ಉ, 41, 46, 47ನ್ನು ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2005ರ ಪರಿಚ್ಚೇದ 3, 4, 8, 25, 26, 29 ಮತ್ತು 34ನ್ನು ಉಲ್ಲಂಘಿಸಿದ್ದಾರೆ ಎಂದು ದೋಷಾರೋಪಣಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ವಾರದ ಎಲ್ಲಾ ದಿನಗಳಲ್ಲಿ ಮೊಟ್ಟೆ ನೀಡಲು ವಿಫಲವಾಗಿರುವುದು. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2005ರ ಪರಿಚ್ಚೇದ 3, 4, 8, 25, 26, 29 ಮತ್ತು 34ರ ಉಲ್ಲಂಘನೆ ಆಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಬರೆದಿದ್ದಾರೆ.
ಮುಸ್ಲಿಂ ಹೆಣ್ಣುಮಕ್ಕಳು ಪರೀಕ್ಷೆಗೆ ಹಿಜಾಬ್ ಧರಿಸುವುದನ್ನು ತಡೆಯುವ ಮತ್ತು ಹಿಜಾಬ್ ಧರಿಸಿದ ಹೆಣ್ಣುಮಕ್ಕಳು ಪರೀಕ್ಷೆಗೆ ಹಾಜರಾಗಲು ಅನುಮತಿಸಿದ ಶಿಕ್ಷಕರನ್ನು ಅಮಾನತ್ತುಗೊಳಿಸುವ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಮತ್ತು ಶಿಕ್ಷಣ ಇಲಾಖೆಯು ಹೊರಡಿಸಿದ್ದ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ಭಾರತ ಸಂವಿಧಾನದ ಅನುಚ್ಚೇದ 14, 15 ಮತ್ತು 19ರ ಉಲ್ಲಂಘನೆ ಆಗಿದೆ.
ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಅನ್ನು ಪಾಲಿಸದ ರೀತಿಯಲ್ಲಿ ಪಠ್ಯವನ್ನು ಪರಿಷ್ಕರಿಸಿರುವುದು. ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2005ರ ಪರಿಚ್ಛೇದ 29 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಉಲ್ಲಂಘನೆ ಆಗಿದೆ.
ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲು ವಿಫಲವಾಗಿದೆ. ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2005ರ ಪರಿಚ್ಚೇದ 3ಮತ್ತು ನಿಯಮ 23ರ ಉಲ್ಲಂಘನೆಯಾಗಿದೆ.
ಭಾರತದ ಸಂವಿಧಾನದ ಮೌಲ್ಯಗಳಲ್ಲಿ ನಂಬಿಕೆಯಿರಿಸಿ ಅದರಂತೆ ನಡೆದುಕೊಳ್ಳುವೆ ಎಂದು ಸಂವಿಧಾನಾತ್ಮಕವಾಗಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ, ಈಗ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ವಿಫಲರಾಗಿರುವುದು. ಎಲ್ಲ ನಾಗರಿಕರಿಗೆ ಸಂವಿಧಾನವು ಖಾತ್ರಿಪಡಿಸುವ ಹಕ್ಕುಗಳನ್ನು ಮತ್ತು ಯಾವುದೇ ರೀತಿಯ ಭಯಕ್ಕೆ ಯಾರ ಕೃಪೆಗೂ ಒಳಗಾಗದೆ ಕಾನೂನನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿರುವುದು, ಭಾರತ ಸಂವಿಧಾನದ ಮೂರನೇ ಅನುಸೂಚಿಯ ಉಲ್ಲಂಘನೆಯಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಿದೆ.







