ಇಟಲಿ ರಾಜಕಾರಣ ಬಿಡಿ, ಭಾರತದ ರಾಜಕಾರಣ ಮಾಡಿ: ಸಚಿವ ಆರ್.ಅಶೋಕ್
ಬೆಂಗಳೂರು, ಜೂ. 14: `ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ತಪ್ಪು ಮಾಡಿಲ್ಲವೆಂದರೆ ಭಯವೇಕೇ? ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆ ಮಾಡಿದರೆ ತಪ್ಪೇನು?' ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಾಂಗ್ರೆಸ್ ಪಕ್ಷದ ಮೇಲೆ ದಾಖಲಿಸಿರುವ ಪ್ರಕರಣವಲ್ಲ. ಆ ಪಕ್ಷದಲ್ಲಿನ ವ್ಯಕ್ತಿಗಳ ಮೇಲೆ ದಾಖಲಿಸಿರುವ ಪ್ರಕರಣ. ಆ ಪಕ್ಷದ ಮುಖಂಡರು ಸುಖಾಸುಮ್ಮನೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರಕಾರಕ್ಕೂ ಈ ಪ್ರಕರಣಕ್ಕೂ ಸಂಬಂಧವಿಲ್ಲ' ಎಂದು ಸ್ಪಷ್ಟಣೆ ನೀಡಿದರು.
`ರಾಹುಲ್‍ಗಾಂಧಿ ಅವರನ್ನು ವಿಚಾರಣೆಗೊಳಪಡಿಸಿರುವುದಕ್ಕೆ ಕಾಂಗ್ರೆಸ್ ನಾಯಕರು ಗದ್ದಲ ಮಾಡುತ್ತಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ತುರ್ತು ಪರಿಸ್ಥಿತಿ ಕೆಟ್ಟದ್ದು ಎಂದು ಈಗಲಾದರೂ ಅರ್ಥವಾಯಿತಲ್ಲ. ಈಡಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದೆ. ಹಾಗೆಯೇ ಕೈ ನಾಯಕರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಿದೆ. ತಪ್ಪು ಮಾಡದಿದ್ದರೆ ಭಯಪಡುವ ಅಗತ್ಯವಿಲ್ಲ' ಎಂದು ಅವರು ತಿಳಿಸಿದರು.
`ನ್ಯಾಷನಲ್ ಹೆರಾಲ್ಡ್ ಪೂರ್ವ ಪತ್ರಿಕೆ ಸ್ವಾತಂತ್ರ್ಯ ಪೂರ್ವದಿಂದಲೂ ಇತ್ತು. ಸರಕಾರ ಈ ಪತ್ರಿಕೆಗೆ ಜಮೀನು ನೀಡಿತ್ತು. ಆ ಜಮೀನನ್ನು ಕಬಳಿಸಲು ಸೋನಿಯಾಗಾಂಧಿ, ರಾಹುಲ್‍ಗಾಂಧಿ ಮುಂದಾಗಿದ್ದಾರೆ. ಈಡಿ ಪ್ರಕರಣ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಇಟಲಿ ರಾಜಕಾರಣ ಬೇಡ. ಭಾರತದ ರಾಜಕಾರಣ ಮಾಡಿ' ಎಂದು ಆರ್.ಅಶೋಕ್ ವ್ಯಂಗ್ಯ ಸಲಹೆ ನೀಡಿದರು.







