ದ.ಕ ಜಿಲ್ಲಾ ಕಾಂಗ್ರೆಸ್ ನವ ಸಂಕಲ್ಪ ಶಿಬಿರಕ್ಕೆ ಚಾಲನೆ

ಮಂಗಳೂರು: ಪಕ್ಷದ ಸಂಘಟನೆ, ಬಲವರ್ಧನೆಗೆ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ದುರಾಡಳಿತ ವನ್ನು ಸಮರ್ಥವಾಗಿ ಎದುರಿಸಲು ಎಐಸಿಸಿ ದೇಶಾದ್ಯಂತ ಹಮ್ಮಿಕೊಂಡಿರುವ ನವ ಸಂಕಲ್ಪ ಶಿಬಿರದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ನವ ಸಂಕಲ್ಪ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಹೋರಾಟದ ಚರಿತ್ರೆಯನ್ನು ಮತ್ತೆ ಯುವ ಜನರಿಗೆ ನೆನಪಿಸುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ತಿಳಿಸುವುದು ಪಕ್ಷ ವನ್ನು ವ್ಯವಸ್ಥಿತವಾಗಿ ಕಟ್ಟುವುದು ಈ ಶಿಬಿರದ ಚಿಂತನೆಯಾಗಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರ ವೈಫಲ್ಯ ಗಳನ್ನು ನಿರುದ್ಯೋಗ ಕೋಮುದ್ವೇಷ ದಂತಹ ಸಮಸ್ಯೆ ಜನರನ್ನು ಕಾಡುತ್ತಿರುವುದಕ್ಕೆ ಕಾರಣಗಳನ್ನು ತಿಳಿಸುವ ಉದ್ದೇಶ ವನ್ನು ಶಿಬಿರ ಹೊಂದಿದೆ. ಕೆಪಿಸಿಸಿ ಶೇ 50ರಷ್ಟು ಸ್ಥಾನವನ್ನು ಮಹಿಳೆಯರಿಗೆ ಮುಂಬರುವ ಚುನಾವಣೆಯಲ್ಲಿ ನೀಡುವ ಗುರಿ ಹೊಂದಿದೆ. ಕಾರ್ಯ ಕರ್ತರು ಪಕ್ಷದ ಶಕ್ತಿ. ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಮತ್ತು ಜನರ ನಡುವೆ ಕೆಲವು ಸಂಘಟನೆ ಗಳು ಕೋಮುದ್ವೇಷದ ಬೀಜ ಬಿತ್ತುವ ಕೆಲಸದಲ್ಲಿ ತೊಡಗಿದೆ. ಇಂತಹ ಸವಾಲುಗಳನ್ನು ಎದುರಿಸಲು, ಯುವ ಮತ್ತು ಮಹಿಳಾ ಸಬಲೀಕರಣ ಈ ಶಿಬಿರದ ಮುಖ್ಯ ಉದ್ದೇಶ ವಾಗಿದೆ ಎಂದು ಸಲೀಂ ಅಹ್ಮದ್ ತಿಳಿಸಿದ್ದಾರೆ.
ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿ, ಸಂಘ ಪರಿವಾರದ ಷಡ್ಯಂತ್ರ ವನ್ನು ಎದುರಿಸಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆ ಈ ಶಿಬಿರದ ಮುಖ್ಯ ಉದ್ದೇಶ. ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ ಮಾತ್ರ. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಎಂದು ಭಾವಿಸಬಾರದು. ಭಾರತ ದೇಶ ಶಾಂತಿ ಯುತ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದಿದೆ. ಅದಕ್ಕಾಗಿ ಸಾಕಷ್ಟು ಕಾಂಗ್ರೆಸ್ ಮುಖಂಡರ ತ್ಯಾಗ, ಬಲಿದಾನ ವಾಗಿದೆ. ದೇಶದ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ ಧರ್ಮ, ಕೋಮು ದ್ವೇಷದ ಮೂಲಕ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿ ಸಲು ಕಾರಣವಾಗಿದೆ. ಈ ದೇಶದಲ್ಲಿ ಅಲ್ಪ ಸಂಖ್ಯಾತರು, ದಲಿತರು ದುರ್ಬಲರ ಮೇಲಾಗುತ್ತಿರುವ ದಾಳಿಗಳು ಸಂವಿಧಾನ ವಿರೋಧಿಗಳು ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಗಳು ಎಂದು ಪರಿಗಣಿಸಬೇಕಾಗಿದೆ. ಬಿಜೆಪಿ ಯುವ ಜನರನ್ನು, ವಿದ್ಯಾರ್ಥಿಗಳನ್ನು ವಿಭಜಿಸುವ ಕಾರ್ಯ ತಂತ್ರದಲ್ಲಿ ತೊಡಗಿದೆ. ಕಾಂಗ್ರೆಸ್ ಇದನ್ನು ತಡೆಯಬೇಕಾಗಿದೆ ಈ ದೇಶದ ಬಹುತ್ವದ ಸಂಸ್ಕೃತಿ ಸಂವಿಧಾನದತ್ತವಾದ ಜನರ ಹಕ್ಕು ಗಳ ಸಂರಕ್ಷಣೆಗೆ ಸಂವಿಧಾನಾತ್ಮಕ ವಾದ ನೆಲೆಯಲ್ಲಿ ಕಾರ್ಯ ತಂತ್ರ ರೂಪಿಸಬೇಕಾಗಿದೆ ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿಬಿರ ಮಹತ್ವ ಪಡೆದಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಶುಭ ಹಾರೈಸಿದರು. ಶಾಸಕ ಮತ್ತು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಶಾಸಕ ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕರಾದ ಡಾ.ಮಂಜುನಾಥ್ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಅಭಯ ಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಪಿ.ವಿ. ಮೋಹನ್, ಜಿ.ಎ.ಬಾವ, ಕಣಚೂರು ಇಬ್ರಾಹಿಂ, ಕೋಡಿಜಾಲ್ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.
ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.