ಡೇಟಾ ಸೋರಿಕೆ ಪ್ರಕರಣಗಳು: ಭಾರತಕ್ಕೆ ಜಗತ್ತಿನಲ್ಲಿ ಆರನೇ ಸ್ಥಾನ

ಹೊಸದಿಲ್ಲಿ: ಜಗತ್ತಿನಲ್ಲಿಯೇ ಗರಿಷ್ಠ ಡೇಟಾ ಸೋರಿಕೆ ನಡೆದ ದೇಶಗಳ ಪೈಕಿ ಭಾರತ ಆರನೇ ಸ್ಥಾನದಲ್ಲಿದೆ ಎಂದು ನೆದರ್‍ಲ್ಯಾಂಡ್ಸ್ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ಸರ್ಫ್‍ಶಾರ್ಕ್ ಸೋಮವಾರ ಬಿಡುಗಡೆಗೊಳಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಭಾರತದಲ್ಲಿ 2004ರಲ್ಲಿ ಮೊದಲ ಬಾರಿ ಡಿಜಿಟಲ್ ದಾಳಿ ಪ್ರಕರಣಗಳು ವರದಿಯಾಗಿದ್ದವು. ಕಳೆದ 18 ವರ್ಷಗಳಲ್ಲಿ ಜಾಗತಿಕವಾಗಿ 14.9 ಬಿಲಿಯನ್ ಖಾತೆಗಳ ಮಾಹಿತಿ ಸೋರಿಕೆಯಾಗಿದ್ದರೆ ಅವುಗಳ ಪೈಕಿ 254.9 ಮಿಲಿಯನ್ ಖಾತೆಗಳು ಭಾರತೀಯ ಬಳಕೆದಾರರದ್ದಾಗಿದೆ ಎಂದು ವರದಿ ತಿಳಿಸಿದೆ.
ಇದರರ್ಥ 2004ರಿಂದ ಪ್ರತಿ 100 ಭಾರತೀಯರ ಪೈಕಿ 18 ಮಂದಿಯ ವೈಯಕ್ತಿಕ ಸಂಪರ್ಕ ವಿವರಗಳು ಸೋರಿಕೆಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ಇಲ್ಲಿಯ ತನಕ 962.7 ಮಿಲಿಯನ್ ಡೇಟಾ ಪಾಯಿಂಟ್‍ಗಳ ಸೋರಿಕೆಯಾಗಿದೆ ಅವುಗಳಲ್ಲಿ ಪಾಸ್‍ವರ್ಡ್‍ಗಳು, ಹೆಸರುಗಳು, ದೂರವಾಣಿ ಸಂಖ್ಯೆಗಳು ಸೇರಿವೆ. ಜಗತ್ತಿನಲ್ಲಿ ಸೋರಿಕೆಯಾದ ಪ್ರತಿ 10 ಖಾತೆ ಮಾಹಿತಿಗಳಲ್ಲಿ ಐದು ಭಾರತದ್ದಾಗಿದೆ ಎಮದು ಸಂಸ್ಥೆ ತಿಳಿದಿದೆ.
ಭಾರತದ ಹೊಸ ಸೈಬರ್ ಸೆಕ್ಯುರಿಟಿ ನಿರ್ದೇಶನದ ಪ್ರಕಾರ ವಿಪಿಎನ್ ಪೂರೈಕೆದಾರರು ಬಳಕೆದಾರರ ಮಾಹಿತಿಗಳನ್ನು ಐದು ವರ್ಷಗಳಿಗೆ ಸಂಗ್ರಹಿಸಬೇಕಿದೆ, ಇದು ಬಳಕೆದಾರರ ಡೇಟಾ ಸೋರಿಕೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿ ಕಂಡುಕೊಂಡಿದೆ.
ಜಗತ್ತಿನಲ್ಲಿ ಗರಿಷ್ಠ ಡೇಟಾ ಸೋರಿಕೆಗಳು ಅಮೆರಿಕಾದಲ್ಲಿ ನಡೆಯುತ್ತಿದೆ. ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಬ್ರೆಜಿಲ್, ಇಟಲಿ ಮತ್ತು ಕೆನಡಾದಲ್ಲಿ ಡೇಟಾ ಸೋರಿಕೆ ಪ್ರಕರಣಗಳು ಅಧಿಕವಾಗಿವೆ ಎಂದು ವರದಿ ಹೇಳಿದೆ.