ಅಮಾಸೆಬೈಲು: ಸಕಲ ಸರಕಾರಿ ಗೌರವದೊಂದಿಗೆ ಎ.ಜಿ.ಕೊಡ್ಗಿ ಅಂತ್ಯ ಸಂಸ್ಕಾರ

ಕುಂದಾಪುರ : ಸೋಮವಾರ ಸಂಜೆ ನಿಧನರಾದ ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಎ.ಜಿ.ಕೊಡ್ಗಿ (93) ಅವರ ಅಂತ್ಯ ಸಂಸ್ಕಾರವು ಮಂಗಳವಾರ ಅಮಾಸೆಬೈಲಿನಲ್ಲಿ ಜನಪ್ರತಿನಿಧಿ, ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ಇದಕ್ಕೂ ಮೊದಲು ಕೊಡ್ಗಿ ಅವರ ಅಮಾಸೆಬೈಲಿನ ಮನೆ ಸಮೀಪದ ಗೇರು ಬೀಜ ಕಾರ್ಖಾನೆ ಆವರಣದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಿರಿಯ ನಾಯಕನ ಅಂತಿಮ ದರ್ಶನವನ್ನು ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು, ಊರಿನವರು, ಅಭಿಮಾನಿಗಳು ಪಡೆದು, ನಮನ ಸಲ್ಲಿಸಿದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಗೃಹ ಸಚಿವ ಅರಗ ಜ್ಞಾನೆಂದ್ರ, ಜಿಲ್ಲಾ ಉಸ್ತುವಾರಿ ಎಸ್. ಅಂಗಾರ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರಾದ ಹರೀಶ್ ಪೂಂಜಾ, ಲಾಲಾಜಿ ಆರ್. ಮೆಂಡನ್, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್ಪಿ ವಿಷ್ಣುವರ್ಧನ್, ಎಸಿ ರಾಜು ಕೆ., ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಸಹಿತ ಅನೇಕ ಗಣ್ಯರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.
ಎರಡು ಬಾರಿ ಬೈಂದೂರಿನಿಂದ ಶಾಸಕರಾಗಿದ್ದ ಎ.ಜಿ.ಕೊಡ್ಗಿ, ಕಳೆದ ಕೆಲ ವರ್ಷಗಳಿಂದ ರಾಜಕೀಯ ನಿವೃತ್ತಿ ಪಡೆದು ಬಳಿಕ ಸಮಾಜ ಸೇವೆಯಲ್ಲಿ ಪೂರ್ಣ ಪ್ರಮಾಣವಾಗಿ ತೊಡಗಿಸಿಕೊಂಡಿದ್ದರು. ಇಳಿವಯಸ್ಸಿನಲ್ಲಿಯೂ ಉತ್ಸಾಹಿ ಜೀವನ ಸಾಗಿಸುತ್ತಿದ್ದ ಇವರು, ಇತ್ತೀಚೆಗೆ ಡೆಂಗ್ಯೂ ರೋಗಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದರು. ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಅವರು ನಿಧನರಾದರು.
"ಚಿಕ್ಕ ವಯಸ್ಸಿನಲ್ಲೇ ರಾಜಕೀಯ ರಂಗಕ್ಕೆ ಬಂದ ಎ.ಜಿ.ಕೊಡ್ಗಿ ಅಭಿವೃದ್ದಿಯ ಕನಸುಗಾರರು. ಕರಾವಳಿ ಅಭಿವೃದ್ಧಿ, ನೀರಿನ ಸೌಲಭ್ಯದ ಬಗ್ಗೆ ದಶಕಗಳ ಹೋರಾಟ ಅವರದ್ದು. ಸೌಭಾಗ್ಯ ಸಂಜೀವಿನಿ, ಎಲ್ಲಾ ನದಿಗಳ ಜೊತೆ ಸುವರ್ಣ ನದಿ ಜೋಡಿಸುವುದು ಅವರ ದೊಡ್ಡ ಕನಸು. ನಾನು ರಾಜಕೀಯ ಆರಂಭಿಸಿದ್ದು ಕೊಡ್ಗಿಯವರ ಕೈಕೆಳಗೆ. ಅವರ ಮಾತಲ್ಲಿ ಗಡಸುತನದೊಂದಿಗೆ, ಪ್ರೀತಿ ಇರುತಿತ್ತು, ಚೆನ್ನಾಗಿ ಕೆಲಸ ಮಾಡಬೇಕೆನ್ನುವ ಕಾಳಜಿಯಿತ್ತು. ಅವರ ಭಾವನೆಯಂತೆ ಮುಂದೆ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವೆ".
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವರು
"ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಪ್ರಾಮಾಣಿಕ ಸೇವೆ ಸಲ್ಲಿಸಿದ ಎ.ಜಿ ಕೊಡ್ಗಿ, ಪ್ರಸ್ತುತ ರಾಜಕೀಯಕ್ಕೆ ಅಪವಾದ ಎನ್ನುವ ರೀತಿ ಯಲ್ಲಿ ಬದುಕಿದ ನಾಯಕ. ಎ.ಜಿ.ಕೊಡ್ಗಿ ಅವರಂತಹ ಮೇರು ವ್ಯಕ್ತಿತ್ವದ ನಾಯಕನನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ. ಆಸ್ಕರ್ ಫೆರ್ನಾಂಡಿಸ್, ಡಾ.ವಿ.ಎಸ್. ಆಚಾರ್ಯರಂತೆಯೇ ಕೊಡ್ಗಿಯವರದ್ದು ವಿಶೇಷ ವಾದ ವ್ಯಕ್ತಿತ್ವ".
-ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರು
"ಎ.ಜಿ.ಕೊಡ್ಗಿ ನಮಗೆಲ್ಲಾ ಮಾರ್ಗದರ್ಶಕರು. ತೀರ್ಥಹಳ್ಳಿಗೂ ಅವರಿಗೂ ಅವಿನಾಭಾವ ಸಂಬಂಧವಿದೆ. ಕೊಡ್ಗಿ ಅವರ ಸಹೋದರಿ ತೀರ್ಥಹಳ್ಳಿಯಲ್ಲಿ ಇದ್ದಿದ್ದರಿಂದ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದರು. ಅವರ ನಿಧನದಿಂದ ತುಂಬಲಾ ರದ ನಷ್ಟವಾಗಿದೆ. ಕೊಡ್ಗಿಯವರ ಕೊಡುಗೆಗಳನ್ನು ಗೌರವಿಸಿ ಮುಖ್ಯಮಂತ್ರಿ, ಸರಕಾರ ಮೃತರಿಗೆ ಪೂರ್ಣ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದೆ. ಸರಕಾರದ ಪರವಾಗಿ ಅಂತಿಮ ನಮನ ಸಲ್ಲಿಸಲು ನಾನು ಬಂದಿದ್ದೇನೆ".
- ಆರಗ ಜ್ಞಾನೇಂದ್ರ, ಗೃಹ ಸಚಿವರು.