ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ: ಸಿದ್ದರಾಮಯ್ಯ

ಬೆಂಗಳೂರು, ಜೂ.14: ದೇಶದಲ್ಲಿ ‘ಅಘೋಷಿತ ತುರ್ತು ಪರಿಸ್ಥಿತಿ' ಜಾರಿಯಲ್ಲಿದೆ, ಶಾಂತಿಯುತ ಪ್ರತಿಭಟನೆ ನಡೆಸಲೂ ಅವಕಾಶ ನೀಡುತ್ತಿಲ್ಲ. ಇದೇನು ಪ್ರಜಾಪ್ರಭುತ್ವವೇ, ಸರ್ವಾಧಿಕಾರವೇ, ಪೊಲೀಸ್ ರಾಜ್ಯವೇ ನನಗೆ ತಿಳಿಯುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದರು.
ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವಂತ, ನಾಗರಿಕರ ಹಕ್ಕುಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ. ನಮ್ಮ ಪಕ್ಷದ ನಾಯಕರಿಗೆ ಎಐಸಿಸಿ ಕಚೇರಿಗೆ ಹೋಗಲು ಅವಕಾಶ ನೀಡದೆ ಪೊಲೀಸರು ಬಂಧಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್ ಅವರ ಮೇಲೆ ದೌರ್ಜನ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಿಗೆ ಅಧಿಕಾರದ ಮದ ಏರಿದೆ. ಪ್ರಜಾಪ್ರಭುತ್ವ, ಸಂವಿಧಾನ, ಮೂಲಭೂತ ಹಕ್ಕುಗಳ ಬಗ್ಗೆ ಅವರಿಗೆ ಮಾಹಿತಿ ಇದೆಯೇ? ತುರ್ತುಪರಿಸ್ಥಿತಿಯನ್ನು ಯಾಕೆ ಇವರು ವಿರೋಧಿಸುತ್ತಾರೆ. ದೇಶದಲ್ಲಿ ಇವತ್ತು ಅಂತಹ ಪರಿಸ್ಥಿತಿಯೇ ಇದೆ. ಪ್ರತಿಭಟನೆ ವೇಳೆ ನಮ್ಮ ನಾಯಕರು ಕಾನೂನು ಕೈಗೆತ್ತಿಕೊಂಡಿದ್ದರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸೋನಿಯಾಗಾಂಧಿ, ರಾಹುಲ್ ಗಾಂಧಿ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ. ಇಂತಹ ದ್ವೇಷದ ರಾಜಕಾರಣವನ್ನು ನಾವು ವಿರೋಧಿಸಬಾರದೇ? ಪ್ರತಿಭಟಿಸಬಾರದೇ? ಈಗಾಗಲೆ ಈ ಪ್ರಕರಣದಲ್ಲಿ ಅವರದ್ದು ಯಾವುದೆ ತಪ್ಪಿಲ್ಲ ಎಂದು ಸಾಬೀತಾಗಿದೆ. ಆದರೂ, ಪೊಲೀಸ್ ಠಾಣೆಯಲ್ಲಿ 8-10 ಗಂಟೆ ವಿಚಾರಣೆ ನಡೆಸುವ ಅಗತ್ಯ ಏನಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ, ಪ್ರಧಾನಿಗೆ ಏನು ಬರೆಯುತ್ತಾರೆ ಅನ್ನೋದು ಮುಖ್ಯ ಅಲ್ಲ. ಈ ಯೋಜನೆ ಜಾರಿಗೆ ಕಾನೂನು ತೊಡಕು ಇಲ್ಲ. ಬಿಜೆಪಿ ಸರಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೇಂದ್ರದ ಬಳಿ ಹೋಗಿ ಯೋಜನೆಗೆ ಅನುಮತಿ ಪಡೆದುಕೊಳ್ಳಬೇಕು. ಕಾವೇರಿ ಮೇಲ್ವಿಚಾರಣಾ ಸಮಿತಿಯಲ್ಲಿ ಯಾವುದೆ ತೀರ್ಮಾನಗಳು ಆಗುತ್ತಿಲ್ಲ. ಸಭೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ ಎಂದು ಅವರು ತಿಳಿಸಿದರು.







