ದೇಶದ ಹಿನ್ನಡೆಗೆ ಬಾಲಕಾರ್ಮಿಕ ಪದ್ಧತಿ ಕಾರಣ: ನ್ಯಾ.ಕಿಶನ್ ಬಿ. ಮಾಡಲಗಿ
ಹೊಸಪೇಟೆ(ವಿಜಯನಗರ), ಜೂ.14: ಸ್ವಾತಂತ್ರ್ಯ ಪೂರ್ವ, ನಂತರದ ವರ್ಷಗಳಲ್ಲಿ ಭಾರತ ಹಿಂದುಳಿದ ರಾಷ್ಟ್ರವಾಗಿತ್ತು. ಸದ್ಯ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಇನ್ನೂ ಮುಂದಾದರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗದಿದ್ದರೆ ದೇಶಕ್ಕೆ ಹಿನ್ನಡೆ ಉಂಟಾಗಲಿದೆ ಎಂದು ವಿಜಯನಗರ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕಿಶನ್ ಬಿ.ಮಾಡಲಗಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ರಾಷ್ಟ್ರದ ಭವಿಷ್ಯದ ರತ್ನಗಳು. ಅವರು ಶಿಕ್ಷಣವನ್ನು ಕಲಿತರೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲರು. ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಕೇವಲ ಸರಕಾರದ ಕೆಲಸವಲ್ಲ. ಇದರ ನಿರ್ಮೂಲನೆಗೆ ಸಮಾಜವು ಕೈಜೋಡಿಸಬೇಕು ಎಂದು ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬ ಮಗುವಿನ ಹಕ್ಕಾಗಿದೆ. ಬಾಲಕಾರ್ಮಿಕ ಪದ್ಧತಿ ಹೀನವಾದುದು. ಅದು ನಿರ್ಮೂಲನೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಆವರಣದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ರಸ್ತೆಯ ಮೂಲಕ ಡಾನ್ ಬಾಸ್ಕೊ ಸಂಸ್ಥೆಯವರೆಗೆ ಜಾಥಾ ನಡೆಯಿತು. ಜಾಥಾಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಉಲ್ಲೂರು ಹೇಮಲತಾ ಬಸಪ್ಪ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರಣ್ಣ ಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮ್ಮದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಯಲಿಗಾರ್, ಪುಷ್ಪಲತಾ, ಮೌನೇಶ್, ಜಂಬಣ್ಣ ಉಪಸ್ಥಿತರಿದ್ದರು.







