ಉಡುಪಿ; ಬುಲ್ಡೋಝರ್ ಪ್ರಯೋಗ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದು ಹೀಗೆ

ಉಡುಪಿ : ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಬುಲ್ಡೋಝರ್ ಪ್ರಯೋಗಿಸುವ ಯಾವುದೇ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಿನ್ನೆ ನಿಧನರಾದ ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯ ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅವರ ಅಂತಿಮ ದರ್ಶನವನ್ನು ಅಮಾಸೆಬೈಲಿನಲ್ಲಿ ಪಡೆದು ಉಡುಪಿಗೆ ಆಗಮಿಸಿದ ಸಚಿವರು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡುತಿದ್ದರು.
ರಾಜ್ಯದಲ್ಲಿ ಸದ್ಯಕ್ಕೆ ಬುಲ್ಡೋಝರ್ ಪ್ರಯೋಗದ ಸಂದರ್ಭಗಳಿಲ್ಲ. ಕರ್ನಾಟಕ ರಾಜ್ಯ ಉತ್ತರ ಪ್ರದೇಶದಂತೆ ಅಲ್ಲ. ಇಲ್ಲಿ ಅಂಥ ಸನ್ನಿವೇಶ ಇನ್ನೂ ಸೃಷ್ಟಿಯಾಗಿಲ್ಲ. ಕಾನೂನು, ಸಂವಿಧಾನವನ್ನು ಅನುಸರಿಸುವ ಮನೋಭಾವ ಇನ್ನೂ ಇಲ್ಲಿನ ಜನರಲ್ಲಿ ಉಳಿದುಕೊಂಡಿದೆ. ಆ ರೀತಿಯ ಅಸ್ತ್ರ ಪ್ರಯೋಗಿಸುವ ಅವಶ್ಯಕತೆ ಸದ್ಯಕ್ಕಿಲ್ಲ ಎಂದು ಗೃಹ ಸಚಿವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷಕ್ಕೆ ಈಗ ಬಹುಮುಖ ಸಿಗುವುದು ಖಚಿತವಾಗಿರುವುದರಿಂದ ಮುಂದಿನ ಅಧಿವೇಶನದಲ್ಲಿ ಯಾವ್ಯಾವ ವಿಧೇಯಕ ಗಳನ್ನು ಮಂಡಿಸಲು ರೆಡಿ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ, ಮತಾಂತರ ನಿಷೇದ ಮಸೂದೆ ಕಾಯ್ದೆ ಇದ್ದು, ಇದಕ್ಕೆ ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಪಡೆಯಲು ಬಾಕಿ ಇದೆ. ಈಗಾಗಲೇ ಅದು ಸುಗ್ರೀವಾಜ್ಞೆ ಆಗಿದೆ. ಇನ್ನು ವಿಧಾನ ಪರಿಷತ್‌ನಲ್ಲಿ ಅದನ್ನು ಮಂಡಿಸಿ ಒಪ್ಪಿಗೆ ಪಡೆದು ಕಾಯ್ದೆಯಾಗಬೇಕಿದೆ. ಅದು ಈಗಾಗಲೇ ವಿಧಾನಸಭೆಯಲ್ಲಿ ಪಾಸಾಗಿದೆ. ಅಲ್ಲದೇ ಇನ್ನೂ ಅನೇಕ ವಿಧೇಯಕಗಳಿದ್ದು, ಅವುಗಳ ಪಟ್ಟಿ ಇನ್ನಷ್ಟೇ ಆಗಬೇಕಿದೆ. ಬಿಲ್‌ಗಳು ತುಂಬಾ ಇವೆ ಎಂದರು.
ರಾಹುಲ್ ಗಾಂಧಿ ವಿಷಯದಲ್ಲಿ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿದ ಅರಗ, ಕಾನೂನು ಕಾಂಗ್ರೆಸ್ ನಾಯಕರಿಗೊಂದು, ಸಾಮಾನ್ಯ ಜನರಿಗೆ ಒಂದು ಎಂಬುದಿಲ್ಲ. ಇಲ್ಲಿ ಕಾನೂನು ಎಲ್ಲರಿಗೂ ಒಂದೇ. ಕೋರ್ಟ್ ವಿಚಾರಣೆಗೆ ಕರೆದರೆ ಹೋಗಿ ಹೇಳಿಕೆ ನೀಡಬೇಕು. ನಿರಪರಾಧಿಯಾದರೆ ಬಿಡುಗಡೆಯಾಗುತ್ತಾರೆ, ಅಪರಾಧಿ ಯಾದರೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ತಾನೇ. ಅದು ಬಿಟ್ಟು ಪ್ರತಿಭಟನೆ ಮಾಡುತ್ತೇವೆ ಎಂದರೆ ಏನರ್ಥ. ಇವರಿಗೆ ನೆಲದ ಕಾನೂನು ಅನ್ವಯಿಸುವುದಿಲ್ಲವೇ. ಇವನ್ನೆಲ್ಲಾ ದೇಶದ ಜನ ನೋಡುತಿದ್ದಾರೆ. ಕಾಂಗ್ರೆಸ್ ಹೀಗೆ ಅಡ್ಡ ಮಾರ್ಗ ಹಿಡಿದಿರುವುದರಿಂಲೇ ಅದು ಕಳೆದುಹೋಗುತ್ತಿದೆ. ನಾಪತ್ತೆಯಾಗುತ್ತಿದೆ ಎಂದರು.
ನಿನ್ನೆ ನಿಧನರಾದ ಎ.ಜಿ.ಕೊಡ್ಗಿ ಅವರನ್ನು ನೆನಪಿಸಿಕೊಂಡ ಅರಗ ಜ್ಞಾನೇಂದ್ರ, ಕೊಡ್ಗಿ ನಮಗೆ ತೀರಾ ಬೇಕಾದವರು. ನನಗಂತೂ ಅವರು ಮಾರ್ಗದರ್ಶಕರು. ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅವರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಪಂಚಾಯತ್‌ರಾಜ್ ವ್ಯವಸ್ಥೆಗೆ ಅವರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ . ಶಾಸಕರಾಗಿ ಸಾರ್ವಜನಿಕ ಜೀವನದಲ್ಲಿ ತುಂಬಾ ದುಡಿದಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅವರ ಸೇವೆಯನ್ನು ಗಮನಿಸಿ ಅವರಿಗೆ ಸಂಪೂರ್ಣ ರಾಜ್ಯಸರಕಾರದ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಿದೆ ಎಂದು ಹೇಳಿದರು.
ಎಸ್‌ಡಿಪಿಐ, ಸಿಎಫ್‌ಐನಂಥ ಮತಾಂಧ ಸಂಘಟನೆಗಳ ನಿಷೇಧದ ಕುರಿತಂತೆ ಚಿಂತನೆ ನಡೆದಿದೆ. ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಅವುಗಳು ನಮ್ಮ ಪೊಲೀಸರ ನಿಗಾದಲ್ಲಿವೆ ಎಂದರು.