ಕನ್ನಡ ನಾಡು ನುಡಿಗೆ ಬ್ಯಾರಿ ಸಮುದಾಯದ ಕೊಡುಗೆ ಅಪಾರ: ಪತ್ರಕರ್ತ ಬಿ.ಎಂ.ಹನೀಫ್

ಚಿಕ್ಕಮಗಳೂರು, ಜೂ.14: ಜಿಲ್ಲೆಯಲ್ಲಿ ಬ್ಯಾರಿಗಳ ಒಕ್ಕೂಟ ಉತ್ತಮ ಮಹತ್ವ ಹೊಂದಿರುವ ಹಾಗೂ ಸಮಾಜಮುಖಿ ಚಟುವಟಿಕೆಯಿಂದ ಕೂಡಿರುವಂತಹ ಒಕ್ಕೂಟವಾಗಿದೆ. ಕನ್ನಡ ಸಾಹಿತ್ಯಕ್ಕೆ ಬ್ಯಾರಿ ಸಮುದಾಯದ ಕೊಡುಗೆಯೂ ಅಪಾರವಾಗಿದೆ ಎಂದು ಚಿಂತಕ ಹಾಗೂ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅಭಿಪ್ರಾಯಿಸಿದರು.
*ತಾಲೂಕಿನ ಮಾಗಡಿ ಗ್ರಾಮದ ಇಂಫಾಲ್ ಕನ್ವೆನ್ಷನ್ ಹಾಲ್‍ನಲ್ಲಿ ಮಂಗಳವಾರ ನಡೆದ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸರ್ವ ಸದಸ್ಯರ ಮಹಾಸಭೆ*ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬ್ಯಾರಿ ಸಮುದಾಯದವರು ಸುಮಾರು ಹದಿನೈದು ಲಕ್ಷ ಮಂದಿ ಇದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ಗೆ ಬ್ಯಾರಿ ಜನಾಂಗದವರು ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಬ್ಯಾರಿಗಳು ಕನ್ನಡ ಕಾದಂಬರಿ, ಕಥೆಗಳನ್ನು ರಚನೆಯಲ್ಲಿ ಛಾಪು ಮೂಡಿಸಿದ್ದಾರೆ ಎಂದರು.
ರಾಜ್ಯದ ವಿವಿಧೆಡೆಯಲ್ಲಿ ಬ್ಯಾರಿ ಜನಾಂಗದವರು ವಾಸಿಸುತ್ತಿದ್ದು, ಅವರದೇ ಆದ ವಿಶೇಷ ಸಂಸ್ಕøತಿಯನ್ನು ಹೊಂದಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯಿಂದ ಕೆಲಸ ಮಾಡುವ ಜೊತೆಗೆ ಯಾವುದೇ ರೀತಿಯ ಜಗಳವಿಲ್ಲದೇ ಸಹನೆಯ ಸಂಸ್ಕøತಿಯನ್ನು ಬ್ಯಾರಿ ಸಮುದಾಯ ಹೊಂದಿರುವುದು ವಿಶೇಷ. ಬ್ಯಾರಿ ಭಾಷೆಗೆ ಸುಮಾರು 1300 ವರ್ಷಗಳ ಪುರಾತನ ಇತಿಹಾಸ ಇದೆ. ರಾಜ್ಯದಲ್ಲಿ ವಿವಿಧ ಧರ್ಮ, ಪಂಗಡಗಳ ಭಾಷೆಗಳಲ್ಲಿ ಬ್ಯಾರಿ ಭಾಷೆಯ ಪದಗಳನ್ನು ಬಳಸುತ್ತಾರೆ, ಇತರ ಭಾಷೆಗಳ ಕಾದಂಬರಿಗಳಲ್ಲೂ ಬ್ಯಾರಿ ಭಾಷೆ ಪದಗಳು ಜೋಡಣೆಯಾಗಿದ್ದು, ಬ್ಯಾರಿ ಭಾಷೆ ಎಲ್ಲರೊಳಗೂ ಒಂದಾಗುವ, ಸಾಮರಸ್ಯ ಬೆಸೆಯುವ ಭಾಷೆಯಾಗಿದೆ. ಬ್ಯಾರಿ ಸಮುದಾಯದ ಜನರೂ ಸಾಮರಸ್ಯ, ಸೌಹಾರ್ದಕ್ಕೆ ಹೆಸರಾದವರು ಎಂದರು.
ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಬ್ಯಾರಿ ಒಕ್ಕೂಟ ಸ್ಥಾಪನೆ ಮಾಡಿರುವುದು ಸಂತಸದ ವಿಷಯ. ಅದೇ ರೀತಿಯ ಒಕ್ಕೂಟದೊಂದಿಗೆ ಸಮುದಾಯದವರು ಕೈಜೋಡಿಸಿ ಸಮಾಜಮುಖಿಗಳು ಕೆಲಸ ಮಾಡುವುದರೊಂದಿಗೆ ಒಕ್ಕೂಟವನ್ನು ಬೆಳೆಸಲು ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಸಮುದಾಯದ ವತಿಯಿಂದ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಬ್ಯಾರಿ ಜನಾಂಗ ಹಾಗೂ ಭಾಷೆ ಅಭಿವೃಧ್ದಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ, ಆದ ಕಾರಣ ಭಾಷೆಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಬ್ಯಾರಿ ಸಂಘದ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಮಾತನಾಡಿ, ಬ್ಯಾರಿ ಜನಾಂಗವು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಯಾವುದೇ ರೀತಿಯ ಮಾತುಗಳನ್ನು ಕಿವಿಕೊಡದೇ ಒಕ್ಕೂಟದ ಶ್ರೇಯೋಭಿವೃದ್ದಿಗೆ ಸಹಕರಿಸಬೇಕು. ಸದಸ್ಯರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಉತ್ತಮ ಒಕ್ಕೂಟ ಸ್ಥಾಪನೆಗೆ ಮುಂದಾಗಬೇಕೆಂದರು.
ಇದೇ ವೇಳೆ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಒಕ್ಕೂಟದ ಸದಸ್ಯರುಗಳು ರಕ್ತದಾನ ಮಾಡಿದರು ಹಾಗೂ ಬಿಪಿ, ಶುಗರ್ ತಪಾಸಣೆಯನ್ನು ಸಂಘದ ವತಿಯಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಫಾರೂಕ್, ಟಿ.ಎಂ.ನಾಸೀರ್, ಬಿ.ಎಸ್.ಮಹಮ್ಮದ್, ಕಾರ್ಯದರ್ಶಿ ಅಲ್ತಾಫ್, ಸದಸ್ಯರಾದ ಎ.ಸಿ.ಅಯೂಬ್, ಮೊಹಿದ್ದೀನ್ ಸೇಟ್, ಅಬೂಬಕ್ಕರ್ ಸಿದ್ದಿಕ್, ವಾಹೀದ್ ಅಹ್ಮದ್, ಮಹಮ್ಮದ್ ಅನೀಫ್, ಕಿರುಗುಂದ ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.







