ಬೇಡಿಕೆ ಈಡೇರಿಸಲು ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಮನವಿ
ಮಂಗಳೂರು: 60 ವರ್ಷ ವಯಸ್ಸಿನ ನೆಪವೊಡ್ಡಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿದ ಸಿಐಟಿಯು ಸಂಯೋಜಿತ ಅಕ್ಷರದಾಸೋಹ ನೌಕರರ ಸಂಘವು ಮಂಗಳವಾರ ಮಂಗಳೂರು ತಾಪಂ ಇಒ ಅವರಿಗೆ ವಿವಿದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆ.
ಸರಕಾರದ ಕ್ರಮವನ್ನು ಖಂಡಿಸಿ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಕೆಲಸ ಕಳಕೊಂಡ ನೌಕರರು ದ.ಕ.ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರಲ್ಲದೆ ತಾಪಂ ಇಒ ಮತ್ತು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
೬೦ ವರ್ಷ ಪ್ರಾಯದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ಅಥವಾ ಇಡಿಗಂಟು ನೀಡಬೇಕು. ಮಾರ್ಚ್ ೩೧, ೨೦೨೨ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿ ರುವ ಸುತ್ತೋಲೆಯನ್ನು ಬದಲಾಯಿಸಿ ಎಪ್ರಿಲ್ ೧೦, ೨೦೨೨ಕ್ಕೆ ಮರು ಆದೇಶ ನೀಡಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ೧,೦೦೦ ರೂ. ಗೌರವ ಧನವನ್ನು ಜನವರಿ ೨೦೨೨ರಿಂದ ಅನ್ವಯಿಸಿ ಜಾರಿಗೊಳಿಸಬೇಕು ಇತ್ಯಾದಿ ಬೇಡಿಕೆಯುನ್ನು ಮುಂದಿಡಲಾಯಿತು.
ನಿಯೋಗದಲ್ಲಿ ಜಿಲ್ಲಾದ್ಯಕ್ಷೆ ಭವ್ಯಾ, ಜಿಲ್ಲಾ ಕಾರ್ಯದರ್ಶಿ ಗಿರಿಜಾ, ಮುಖಂಡರಾದ ರೇಖಲತಾ, ಜಯಶ್ರಿ ಮತ್ತು ಸಿಐಟಿಯು ಉಪಾಧ್ಯಕ್ಷ ವಸಂತ ಆಚಾರಿ ಮತ್ತಿತರರಿದ್ದರು.







