ಏಶ್ಯನ್ ಕಪ್: ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಪುರುಷರ ಫುಟ್ಬಾಲ್ ತಂಡ

Twitter/IndianFootballTeam
ಕೋಲ್ಕತಾ, ಜೂ.14: ಮಂಗೋಲಿಯದಲ್ಲಿ ಮಂಗಳವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಫೆಲೆಸ್ತೀನ್ ತಂಡವು ಫಿಲಿಪ್ಪೀನ್ಸ್ ವಿರುದ್ಧ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಪುರುಷರ ಫುಟ್ಬಾಲ್ ತಂಡವು 2023ರಲ್ಲಿ ನಡೆಯುವ ಏಶ್ಯನ್ ಕಪ್ಗೆ ಅರ್ಹತೆ ಪಡೆದಿದೆ.
ಈ ಫಲಿತಾಂಶದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಫೆಲೆಸ್ತೀನ್ 24 ತಂಡಗಳು ಭಾಗವಹಿಸಲಿರುವ ಏಶ್ಯನ್ಕಪ್ಗೆ ನೇರ ಅರ್ಹತೆ ಪಡೆದಿದೆ. ಫಿಲಿಪ್ಪೀನ್ಸ್ 4 ಅಂಕದೊಂದಿಗೆ ಎರಡನೇ ಸ್ಥಾನ ಪಡೆದರೂ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಆರು ಅರ್ಹತಾ ಗುಂಪುಗಳ ವಿಜೇತ ತಂಡ ಮಾತ್ರ ಟೂರ್ನಮೆಂಟ್ಗೆ ಅರ್ಹತೆ ಪಡೆಯುತ್ತವೆ. ಅಲ್ಲಿ ಅದು ಆಯಾ ಗುಂಪುಗಳ ಎರಡನೇ ಸ್ಥಾನ ಪಡೆದ ಐದು ಶ್ರೇಷ್ಠ ತಂಡಗಳನ್ನೊಂದಿಗೆ ಸೇರಿಕೊಳ್ಳಲಿವೆ.
ಗೋಲು ವ್ಯತ್ಯಾಸದಲ್ಲಿ ಭಾರತವು ಹಾಂಕಾಂಗ್(6 ಅಂಕಗಳು)ಬಳಿಕ ಎರಡನೇ ಸ್ಥಾನದಲ್ಲಿದೆ. ಡಿ ಗುಂಪಿನಲ್ಲಿ ತನ್ನ ಅಂತಿಮ ಪಂದ್ಯವನ್ನಾಡುವ ಮೊದಲೇ ಭಾರತವು ಏಶ್ಯನ್ ಕಪ್ಗೆ ಅರ್ಹತೆ ಪಡೆದಿದೆ.
ಭಾರತವು ಇದೇ ಮೊದಲ ಬಾರಿ ಸತತ ಎರಡು ಆವೃತ್ತಿಗಳಲ್ಲಿ ಏಶ್ಯನ್ ಕಪ್ಗೆ ಅರ್ಹತೆ ಪಡೆದಿದೆ. 2019ರ ಆವೃತ್ತಿಯಲ್ಲೂ ಏಶ್ಯನ್ ಕಪ್ನಲ್ಲಿ ಆಡುವ ಅವಕಾಶ ಪಡೆದಿದ್ದ ಭಾರತ ಗ್ರೂಪ್ಲೀಗ್ ಹಂತದಲ್ಲೇ ಸೋತು ನಿರ್ಗಮಿಸಿತ್ತು.
ಒಟ್ಟಾರೆ ಭಾರತವು ಇದೀಗ ಐದನೇ ಬಾರಿ ಏಶ್ಯನ್ ಕಪ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೊದಲು 1964, 1984, 2011 ಹಾಗೂ 2019ರಲ್ಲಿ ಅರ್ಹತೆ ಪಡೆದಿತ್ತು.