ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ; ಶಿಹಾಬ್ ಚೊಟ್ಟೂರಿಗೆ ಭಟ್ಕಳದಲ್ಲಿ ಸ್ವಾಗತ

ಭಟ್ಕಳ: 2023ರ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಲು ಕೇರಳದ ಮಲಪ್ಪುರಂನಿಂದ ಸುಮಾರು 8,600ಕ್ಕೂ ಅಧಿಕ ಕಿ.ಮೀ. ದೂರದ ಸೌದಿ ಅರೆಬಿಯಾದ ಪವಿತ್ರ ಮಕ್ಕಾ ನಗರ ತಲುಪುವ ಸಂಕಲ್ಪದೊಂದಿಗೆ ಕಾಲ್ನಡಿಗೆ ಯಾತ್ರೆ ಕೈಗೊಂಡಿರುವ ಶಿಹಾಬ್ ಚೊಟ್ಟೂರು, ಮಂಗಳವಾರ ಬೆಳಗ್ಗೆ ಉ.ಕ ಜಿಲ್ಲೆಯ ಗಡಿ ಪ್ರವೇಶಿಸಿದ್ದು ಭಟ್ಕಳದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ತಾಲೂಕಿನ ಗಡಿಯಾಗಿರುವ ಗೋರ್ಟೆಯಲ್ಲಿ ಸರ್ಪನಕಟ್ಟೆ, ಉಸ್ಮಾನ್ ನಗರ, ಬೆಳ್ಕೆ, ಪುರವರ್ಗದ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಸ್ವಾಗತ ನೀಡುವುದರೊಂದಿಗೆ ಹಜ್ ಯಾತ್ರಿಕ ಶಿಹಾಬ್ ಅವರೊಂದಿಗೆ ಕಾಲ್ನಡಿಗೆಯಲ್ಲೇ ಭಟ್ಕಳ ಪ್ರವೇಶಿಸಿದರು.
ಬಸ್ ನಿಲ್ದಾಣ ಪಕ್ಕದಲ್ಲಿರುವ ನೂರ್ ಮಸೀದಿಯಲ್ಲಿ ಶಿಹಾಬ್ ರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕೆಲ ಸಮಯ ನೂಕುನುಗ್ಗಲು ಉಂಟಾಯಿತು.
ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ನೂರ್ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಮೀನ್ ರುಕ್ನುದ್ದೀನ್ ನದ್ವಿ, ಉದ್ಯಮಿ ಪಿ.ಬಿ.ಇಬ್ರಾಹೀಮ್, ಮಸೀದಿ ಕಮಿಟಿಯ ಅಧ್ಯಕ್ಷ ಆಸಿಫ್ ದಾಮೂದಿ, ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮಿ ಸಿದ್ದೀಖಿ, ತಂಝಿಮ್ ಸಂಸ್ಥೆಯ ಕಾರ್ಯದರ್ಶಿ ಜೈಲಾನಿ ಶಾಬಂದ್ರಿ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇರಳದ ಮಲಪ್ಪುರಂ ಜಿಲ್ಲೆಯ ಕನಿಪುರದಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿರುವ ಶಿಹಾಬ್ ಚೊಟ್ಟೂರು (30) ಪಾದಯಾತ್ರೆ ಮೂಲಕ ಹಜ್ ಯಾತ್ರೆಗೆ ಹೊರಡಬೇಕೆಂದು ಸುಮಾರು 8 ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಎಲ್ಲ ಅನುಮತಿಯನ್ನು ಕೂಡ ಪಡೆದುಕೊಂಡಿದ್ದಾರೆ.
ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಹರಿಯಾಣ, ಪಂಜಾಬ್, ವಾಘಾ ಗಡಿ ಮೂಲಕ ಪಾಕಿಸ್ತಾನ, ಇರಾಕ್, ಇರಾನ್, ಕುವೈತ್ ಮೂಲಕ ಸೌದಿ ಅರೇಬಿಯಾ ತಲುಪಲಿದ್ದಾರೆ.
ತನ್ನ ಕಾಲ್ನಡಿಗೆ ಯಾತ್ರೆ ಕುರಿತಂತೆ ಮಾಹಿತಿ ನೀಡಿದ ಅವರು, ಜೂನ್ 2 ರಂದು ಮಲಪ್ಪುರಂ ದಿಂದ ಹೊರಟಿದ್ದು, ಒಟ್ಟು 8640 ಕಿ,ಮೀ ಹಾದಿಯನ್ನು 280 ದಿನಗಳಲ್ಲಿ ತಲುಪುವ ಗುರಿಯನ್ನು ಹೊಂದಿದ್ದಾರೆ. ಪ್ರತಿದಿನ 25 ಕಿ.ಮೀ ನಡೆದು, ಒಂಭತ್ತು ತಿಂಗಳು 10 ದಿನ ಪ್ರಯಾಣದ ಬಳಿಕ ಸೌದಿ ಅರೇಬಿಯಾ ತಲುಪಲಿದ್ದೇನೆ. 2023ನೇ ಸಾಲಿನ ಹಜ್‍ಗೆ ಅರ್ಜಿ ಹಾಕಿ ಹಜ್ ಪ್ರಕ್ರಿಯೆ ನಡೆಸುವುದು ನನ್ನ ಉದ್ದೇಶ. ಇದಕ್ಕೆ ನನ್ನ ಕುಟುಂಬ, ಗೆಳೆಯರ ಸಹಕಾರವಿದೆ’ ಎಂದು ಹೇಳಿದ್ದಾರೆ.












