ವಿಶ್ವಸಂಸ್ಥೆಯ ಟೀಕೆಯ ಹೊರತಾಗಿಯೂ ವಲಸಿಗರ ಗಡೀಪಾರಿಗೆ ಬ್ರಿಟನ್ ಸಿದ್ಧತೆ

PHOTO: AFP
ಲಂಡನ್, ಜೂ.14: ಬ್ರಿಟನ್ನಲ್ಲಿ ಆಶ್ರಯ ಕೋರಿ ಬಂದಿರುವ ವಲಸಿಗರನ್ನು ಗಡೀಪಾರು ಮಾಡುವ ಸರಕಾರದ ನಿರ್ಧಾರವನ್ನು ವಿಶ್ವಸಂಸ್ಥೆ ಟೀಕಿಸಿದ ಹೊರತಾಗಿಯೂ ವಲಸಿಗರ ಪ್ರಥಮ ತಂಡವನ್ನು ರುವಾಂಡಾಕ್ಕೆ ರವಾನಿಸುವ ಪ್ರಕ್ರಿಯೆಗೆ ಮಂಗಳವಾರ ಸಿದ್ಧತೆ ಪೂರ್ಣಗೊಂಡಿದೆ ಎಂದು ವರದಿಯಾಗಿದೆ.
ವಲಸಿಗರ ಪ್ರಥಮ ತಂಡವನ್ನು ಹೊತ್ತ ಬಾಡಿಗೆ ವಿಮಾನ ಮಂಗಳವಾರ ತಡರಾತ್ರಿ ಲಂಡನ್ ವಿಮಾನ ನಿಲ್ದಾಣದಿಂದ ಹೊರಟು ಬುಧವಾರ ರುವಾಂಡದ ಕಿಗಾಲಿಯನ್ನು ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಡೀಪಾರಿಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ನ್ಯಾಯಾಧೀಶರು ಸೋಮವಾರ ತಿರಸ್ಕರಿಸಿದ್ದಾರೆ. ಗಡೀಪಾರು ನಿರ್ಧಾರದ ಸಿಂಧುತ್ವದ ಬಗ್ಗೆ ಮುಂದಿನ ತಿಂಗಳು ಪೂರ್ಣಪ್ರಮಾಣದ ನ್ಯಾಯಪೀಠ ವಿಚಾರಣೆ ನಡೆಸಲಿದ್ದು ಅದುವರೆಗೆ ಗಡೀಪಾರು ನಿರ್ಧಾರ ತಡೆಹಿಡಿಯಬೇಕೆಂದು ಅರ್ಜಿದಾರರು ಕೋರಿದ್ದರು. ಪ್ರಥಮ ತಂಡದಲ್ಲಿ ಅಲ್ಬೇನಿಯನ್, ಇರಾಕ್, ಇರಾನ್ ಮತ್ತು ಸಿರಿಯಾದ 31 ವಲಸಿಗರು ಇರಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರೆ, ಇವರಲ್ಲಿ 23 ಮಂದಿಯ ಟಿಕೆಟ್ ಅಂತಿಮ ಕ್ಷಣದಲ್ಲಿ ರದ್ದಾಗಿದೆ ಎಂದು ಎನ್ಜಿಒ ಸಂಘಟನೆಯೊಂದು ಹೇಳಿದೆ.
ಜುಲೈಯಲ್ಲಿ ನಡೆಯುವ ಪೂರ್ಣಪೀಠದ ವಿಚಾರಣೆ ಸಂದರ್ಭ ಮಂಗಳವಾರದ ಗಡೀಪಾರು ಪ್ರಕ್ರಿಯೆ ಕಾನೂನು ಬಾಹಿರ ಎಂದು ತೀರ್ಪು ಪ್ರಕಟವಾದರೆ ಭಯಾನಕ ಪರಿಸ್ಥಿತಿ ಎದುರಾಗಬಹುದು ಎಂದು ಅರ್ಜಿದಾರರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ದೇಶಕ್ಕೆ ಬರುವ ಹತಾಶ ಜನರ ಬಗ್ಗೆ ಮಾತ್ರವಲ್ಲ, ಅವರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಬಗ್ಗೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ಗೆ ಗೌರವ ಇದ್ದರೆ ಅವರು ಜುಲೈ ತಿಂಗಳವರೆಗೆ ಕಾಯಬೇಕು ಎಂದು ಗಡೀಪಾರು ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಎನ್ಜಿಒಗಳಲ್ಲಿ ಒಂದಾಗಿರುವ ‘ಪಬ್ಲಿಕ್ ಆ್ಯಂಡ್ ಕಮರ್ಷಿಯಲ್ ಸರ್ವಿಸಸ್ ಯೂನಿಯನ್’ (ಪಿಸಿಎಸ್)ನ ಮುಖ್ಯಸ್ಥ ಮಾರ್ಕ್ ಸೆರ್ವೊಟ್ಕ ಹೇಳಿರುವುದಾಗಿ ಸ್ಕೈನ್ಯೂಸ್ ವರದಿ ಮಾಡಿದೆ.
ಬ್ರಿಟನ್ನ ಕಾರ್ಯನೀತಿ ತಪ್ಪು ಎಂದು ವಲಸಿಗರ ಕುರಿತಾದ ವಿಶ್ವಸಂಸ್ಥೆಯ ಏಜೆನ್ಸಿಯ ಮುಖ್ಯಸ್ಥ ಫಿಲಿಪೊ ಗ್ರಾಂಡಿ ಜಿನೆವಾದಲ್ಲಿ ಪ್ರತಿಕ್ರಿಯಿಸಿದ್ದು ಬ್ರಿಟನ್ ತನ್ನ ಜವಾಬ್ದಾರಿಯನ್ನು ಮತ್ತೊಂದು ದೇಶಕ್ಕೆ ರಫ್ತು ಮಾಡಬಾರದು ಎಂದಿದ್ದಾರೆ.
ಇದೊಂದು ಅನೈತಿಕ ನೀತಿಯಾಗಿದೆ. ಒಂದು ದೇಶವಾಗಿ ನಮ್ಮನ್ನು ನಾಚಿಕೆಪಡಿಸುವ ನೀತಿಯಾಗಿದೆ ಎಂದು ಕ್ಯಾಂಟರ್ಬರಿಯ ಆರ್ಚ್ಬಿಷಪ್ ಸಹಿತ ಇಂಗ್ಲೆಂಡ್ ಚರ್ಚ್ನ ಮುಖಂಡರು ಟೀಕಿಸಿದ್ದಾರೆ. ನಮ್ಮ ಕ್ರಿಶ್ಚಿಯನ್ ಪರಂಪರೆಯು ಸಹಾನುಭೂತಿ, ನ್ಯಾಯಸಮ್ಮತತೆ ಮತ್ತು ನ್ಯಾಯದೊಂದಿಗೆ ಆಶ್ರಯ ಪಡೆಯುವವರನ್ನು ಪರಿಗಣಿಸಲು ನಮಗೆ ಸ್ಫೂರ್ತಿ ನೀಡಬೇಕು ಎಂದು 25 ಬಿಷಪರು ಮಂಗಳವಾರದ ಟೈಮ್ಸ್ ದಿನಪತ್ರಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಗಡೀಪಾರು ನೀತಿಯನ್ನು ಬ್ರಿಟಿಷ್ ಸರಕಾರ ಸಮರ್ಥಿಸಿಕೊಂಡಿದೆ. ಫ್ರಾನ್ಸ್ ಮೂಲಕ ವಲಸಿಗರ ಪ್ರವಾಹಕ್ಕೆ ತಡೆಯೊಡ್ಡುವುದು ಅನಿವಾರ್ಯವಾಗಿದೆ ಎಂದು ಬ್ರಿಟನ್ನ ವಿದೇಶಾಂಗ ಸಚಿವೆ ಲಿರ್ ಟ್ರೂಸ್ರನ್ನು ಉಲ್ಲೇಖಿಸಿ ಸ್ಕೈನ್ಯೂಸ್ ವರದಿ ಮಾಡಿದೆ.
ವಲಸಿಗರ ಕಳ್ಳಸಾಗಣೆ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಈ ಭಯಾನಕ ಜನರ ವ್ಯವಹಾರಕ್ಕೆ ಅಂಕುಶ ಹಾಕುವುದು ನಿಜಕ್ಕೂ ಮಹತ್ವದ ಕಾರ್ಯವಾಗಿದೆ ಎಂದವರು ಹೇಳಿದ್ದಾರೆ.