ಉ.ಪ್ರ.: ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ ; 13 ಪ್ರಕರಣ ದಾಖಲು, 337 ಮಂದಿಯ ಬಂಧನ
ಲಕ್ನೋ, ಜೂ. 14: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜೂನ್ 10ರಂದು ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ನಡೆದ ಸಂದರ್ಭ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ 8 ಜಿಲ್ಲೆಗಳಿಂದ ಇದುವರೆಗೆ 337 ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿ 9 ಜಿಲ್ಲೆಗಳಲ್ಲಿ 13 ಎಫ್‌ಐಆರ್‌ಗಳನ್ನು ಕೂಡ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಪ್ರಶಾಂತ್ ಕಿಶೋರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂಧಿಸಲಾಗಿರುವ 337 ಮಂದಿಯಲ್ಲಿ ಪ್ರಯಾಗ್‌ರಾಜ್‌ನ 92, ಸಹಾರನಪುರದ 83, ಹಾಥರಸ್‌ನ 52, ಅಂಬೇಡ್ಕರ್ ನಗರದ 41, ಮೊರದಾಬಾದ್‌ನ 40, ಫಿರೋಝಾಬಾದ್‌ನ 18, ಅಲಿಗಢದ 9 ಹಾಗೂ ಜಲೌನ್‌ನ 5 ಮಂದಿ ಸೇರಿದ್ದಾರೆ ಎಂದು ಕುಮಾರ್ ಅವರು ತಿಳಿಸಿದ್ದಾರೆ.
13 ಪ್ರಕರಣಗಳಲ್ಲಿ ಪ್ರಯಾಗ್ ರಾಜ್ ಹಾಗೂ ಸಹಾರನಪುರದಲ್ಲಿ ತಲಾ 3 ಪ್ರಕರಣಗಳನ್ನು ದಾಖಲಿಸಲಾಗಿದೆ. ಫಿರೋಝಾಬಾದ್, ಅಂಬೇಡ್ಕರ್ ನಗರ್, ಮೊರದಾಬಾದ್, ಹಾಥರಸ್, ಅಲಿಗಢ, ಲಖಿಂಪುರ ಖೇರಿ ಹಾಗೂ ಜಲೌನ್‌ನಲ್ಲಿ ತಲಾ 1 ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







