ಸಿಧು ಮೂಸೆವಾಲಾ ಹತ್ಯೆ ಪ್ರಕರಣ : ಲಾರನ್ಸ್ ಬಿಷ್ಣೋಯಿ ಪಂಜಾಬ್ ಪೊಲೀಸ್ ವಶಕ್ಕೆ
ಹೊಸದಿಲ್ಲಿ, ಜೂ. ೧೪: ದಿಲ್ಲಿ ಪಾಟಿಯಾಲ ಹೌಸ್ ನ್ಯಾಯಾಲಯ ಅನುಮತಿ ನೀಡಿದ ಬಳಿಕ ಪಂಜಾಬ್ ಪೊಲೀಸರು ಭೂಗತಪಾತಕಿ ಲಾರೆನ್ಸ್ ಭಿಷ್ಣೋಯಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧನಕ್ಕೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವಂತೆ ಪಂಜಾಬ್ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಅಲ್ಲದೆ, ಅನಂತರ ಟ್ರಾನ್ಸಿಟ್ ಡಿಮಾಂಡ್ (ವರ್ಗಾವಣೆ) ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿತು.
ಪಂಜಾಬ್ ಪೊಲೀಸರು ಬಿಷ್ಣೋಯಿಯನ್ನು ಬಂಧಿಸಿದ ಬಳಿಕ ಪಾಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಕಾಂಗ್ರೆಸ್ ಟಿಕೇಟ್‌ನಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂಸೆ ವಾಲ ಅವರನ್ನು ಮಾನ್ಸಾ ಜಿಲ್ಲೆಯಲ್ಲಿ ಮೇ ೨೯ರಂದು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಈ ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದರು.
ಆದರೆ, ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಷ್ಣೋಯಿ ಹೇಳಿದ್ದಾನೆ. ತನ್ನ ತಂಡದ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ಅವರು ಯೋಜಿಸಿದ್ದಾರೆ ಹಾಗೂ ಹತ್ಯೆ ನಡೆಸಿದ್ದಾರೆ ಎಂದು ಆತ ಪ್ರತಿಪಾದಿಸಿದ್ದಾನೆ. ಮೂಸೆ ವಾಲ ಅವರ ಹತ್ಯೆಯ ಹೊಣೆ ಹೊತ್ತ ಕೆನಡಾ ಮೂಲದ ಭೂಗತಪಾತಕಿ ಗೋಲ್ಡಿ ಬ್ರಾರ್‌ನೊಂದಿಗೆ ಈತ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.





