ಇಂದಿನ ಪ್ರತಿಪಕ್ಷಗಳ ಸಭೆಯಿಂದ ಹೊರಗುಳಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ಟಿಆರ್ ಎಸ್

Photo:PTI
ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಜಂಟಿ ಕಾರ್ಯತಂತ್ರದ ಕುರಿತು ಚರ್ಚಿಸಲು ಮಮತಾ ಬ್ಯಾನರ್ಜಿ ಅವರು ಬುಧವಾರ ಕರೆದಿರುವ ವಿಪಕ್ಷಗಳ ಪ್ರಮುಖ ಸಭೆಗೆ ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಹೊರಗುಳಿಯಲು ನಿರ್ಧರಿಸಿದ್ದಾರೆ.
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧ ಐಕ್ಯ ಹೋರಾಟದ ಕುರಿತು ಚರ್ಚಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಲ್ಲಿಯಲ್ಲಿ ಬುಧವಾರ ನಿಗದಿಯಾಗಿರುವ ಸಭೆಗೆ 22 ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದಾರೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾಂಗ್ರೆಸ್ಗೆ ಆಹ್ವಾನ ನೀಡುವುದಕ್ಕೆ ತೀವ್ರ ಆಕ್ಷೇಪಣೆಯನ್ನು ಎತ್ತುವ ಮೂಲಕ ಸಭೆಯಿಂದ ಹೊರಗುಳಿಯಿತು. ಈ ಮೂಲಕ ಬಿಜೆಪಿ ವಿರುದ್ಧ ವಿಪಕ್ಷಗಳ ಒಗ್ಗಟ್ಟಿಗೆ ಆರಂಭದಲ್ಲೇ ಹಿನ್ನಡೆಯಾಗಿದೆ.
"ಕಾಂಗ್ರೆಸ್ನೊಂದಿಗೆ ಯಾವುದೇ ವೇದಿಕೆ ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಟಿಆರ್ಎಸ್ ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ಆಕ್ಷೇಪಣೆಗಳ ಹೊರತಾಗಿಯೂ ಕಾಂಗ್ರೆಸ್ ಅನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಪಕ್ಷವು ಹೇಳಿದೆ ಹಾಗೂ ರಾಹುಲ್ ಗಾಂಧಿಯವರ ಇತ್ತೀಚಿನ ಟೀಕೆಗಳನ್ನು ಉಲ್ಲೇಖಿಸಿದೆ.
"ರಾಹುಲ್ ಗಾಂಧಿ ಅವರು ಇತ್ತೀಚೆಗೆ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ಧ ಯಾವುದೇ ಟೀಕೆ ಮಾಡದೆ ಟಿಆರ್ಎಸ್ ಸರಕಾರವನ್ನು ಗುರಿಯಾಗಿಸಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ "ಬಿಜೆಪಿಯೊಂದಿಗೆ ಸೇರಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ.
ಸಭೆಯಲ್ಲಿ ಪಾಲ್ಗೊಳ್ಳಲಿರುವ ಎನ್ಸಿಪಿ ನಾಯಕ ಶರದ್ ಪವಾರ್ ಅವರು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.