3ನೇ ದಿನದ ವಿಚಾರಣೆಗೆ ಹಾಜರಾಗಲು ಈಡಿ ಕಚೇರಿಗೆ ತೆರಳಿದ ರಾಹುಲ್ ಗಾಂಧಿ

Photo:PTI
ಹೊಸದಿಲ್ಲಿ: ಸತತ ಮೂರನೇ ದಿನವೂ ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ (ಈಡಿ) ಕಚೇರಿಗೆ ತಲುಪಿದ್ದಾರೆ.
'ನ್ಯಾಷನಲ್ ಹೆರಾಲ್ಡ್' ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 3ನೇ ದಿನದ ವಿಚಾರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಳಗ್ಗೆ 11.30ರ ಸುಮಾರಿಗೆ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಗೆ ಆಗಮಿಸಿದರು.
ಇಂದು ಪಕ್ಷದ ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಸ್ಗಳಲ್ಲಿ ತುಂಬಿದ್ದಾರೆ. ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ 11 ಗಂಟೆಗಳ ಕಾಲ ತನಿಖಾ ಸಂಸ್ಥೆ ಈಡಿ ರಾಹುಲ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ನಿನ್ನೆ ರಾತ್ರಿ 2 ನೇ ದಿನದ ವಿಚಾರಣೆಯ ನಂತರ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸರ್ ಗಂಗಾ ರಾಮ್ ಆಸ್ಪತ್ರೆಗೆ ತೆರಳಿ ತಮ್ಮ ತಾಯಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದರು. ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಕಾಂಗ್ರೆಸ್ ಅಧ್ಯಕ್ಷೆಯವರನ್ನು ರವಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.