ಮಂಗಳೂರು: ಕೋಸ್ಟ್‌ಗಾರ್ಡ್ ಅಧಿಕಾರಿಗಳಿಗೆ ವಸತಿಗೃಹ ಲೋಕಾರ್ಪಣೆ

ಮಂಗಳೂರು, ಜೂ.15: ಭಾರತೀಯ ಕೋಸ್ಟ್ ಗಾರ್ಡ್‌ನ ಅಧಿಕಾರಿಗಳಿಗೆ ಮಂಗಳೂರು ಹೊರವಲಯದ ಬಜ್ಪೆಯಲ್ಲಿ ಮೀಸಲಿರಿಸಲಾದ ಎರಡು ಪ್ರತ್ಯೇಕ ವಸತಿ ಗೃಹಗಳನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.
ಕೋಸ್ಟ್‌ಗಾರ್ಡ್ ಪಶ್ಚಿಮ ವಿಭಾಗದ ಪ್ರಾದೇಶಿಕ ಕಮಾಂಡರ್ ಎಸ್.ಪರಮೇಶ್ ವರ್ಚುವಲ್ ಮೂಲಕ ಇದರ ಉದ್ಘಾಟನೆ ನೆರವೇರಿಸಿದರು.
ಒಟ್ಟು 802.31 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಎರಡು ವಸತಿಗೃಹದಲ್ಲಿ 83 ಮಂದಿ ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಇದೆ. ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್(ಡಿಎಸ್‌ಸಿ) ಎಕಮಡೇಷನ್ ಹೆಸರಿನಲ್ಲಿ ಈ ವಸತಿಗೃಹಗಳನ್ನು ನಿರ್ಮಿಸಲಾಗಿದೆ. 597.48 ಲಕ್ಷ ರೂ. ಹಾಗೂ 204.83 ಲಕ್ಷ ರೂ.ಗಳಲ್ಲಿ ಈ ವಸತಿಗೃಹ ನಿರ್ಮಾಣ ಮಾಡಲಾಗಿದೆ. ಹಸಿರು ತಾಂತ್ರಿಕತೆ ಬಳಸಿ ಪರಿಸರ ಸ್ನೇಹಿ ಕಟ್ಟಡ ನಿರ್ಮಿಸಲಾಗಿದೆ.
ಇದರಲ್ಲಿ ಡೈನಿಂಗ್ ಹಾಲ್, ಸೆಲೂನ್, ವಿಶಾಲ ಪಾರ್ಕಿಂಗ್, ಲೈಬ್ರೆರಿ, ವಾಲಿಬಾಲ್ ಗೇಮ್ಸ್ ಸೇರಿದಂತೆ ಅತ್ಯಾವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್‌ನ ತಾಂತ್ರಿಕ ನೆರವಿನಲ್ಲಿ ಈ ಕಟ್ಟಡವನ್ನು ರಚಿಸಲಾಗಿದೆ. ಕೋಸ್ಟ್‌ಗಾರ್ಡ್ ಅಧಿಕಾರಿಗಳಿಗೆ ಆಡಳಿತಾತ್ಮಕ, ತಾಂತ್ರಿಕವಾಗಿ ಹಾಗೂ ವಾಸ್ತವ್ಯಕ್ಕೆ ಅವಶ್ಯಕ ಮೂಲಸೌಕರ್ಯ ಒದಗಿಸಲಾಗಿದೆ ಭದ್ರತಾ ನಿರ್ವಹಣೆಗೂ ಈ ಕಟ್ಟಡ ಬಳಕೆಯಾಗಲಿದ್ದು, ಈ ಮೂಲಕ ಕರಾವಳಿಯಲ್ಲಿ ಕೋಸ್ಟ್‌ಗಾರ್ಡ್ ಕಾರ್ಯಾಚರಣೆಗೆ ಇನ್ನಷ್ಟು ಬಲ ನೀಡಿದಂತಾಗಿದೆ ಎಂದು ಪ್ರಾದೇಶಿಕ ಕಮಾಂಡರ್ ಎಸ್.ಪರಮೇಶ್ ಹೇಳಿದರು.
ಈ ವೇಳೆ ಕೋಸ್ಟ್‌ಗಾರ್ಡ್ ಡಿಐಜಿ ಪಿ.ರಾಜೇಶ್, ಕಮಾಂಡೆಂಟ್ ವೆಂಕಟೇಶ್ ಮತ್ತಿತರರಿದ್ದರು.
