ಪಶುವೈದ್ಯರನ್ನು ಬರಹೇಳಿ ಅಪಹರಿಸಿ ಬಲವಂತದಿಂದ ಮದುವೆ; ದೂರು ದಾಖಲು
ಏನಿದು 'ಪಕಡ್ವಾ ವಿವಾಹ್'?
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅನಾರೋಗ್ಯದಿಂದಿರುವ ಪ್ರಾಣಿಯೊಂದರ ಪರೀಕ್ಷೆ ನಡೆಸಲು ಕರೆಸಲಾಗಿದ್ದ ಪಶುವೈದ್ಯರೊಬ್ಬರನ್ನು ಮೂವರ ತಂಡವೊಂದು ಅಪಹರಿಸಿ ನಂತರ ಅವರಿಗೆ ಬಲವಂತದಿಂದ ಮದುವೆ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ಮಂಗಳವಾರ ನಡೆದಿದೆ.
"ಪಶುವೈದ್ಯರನ್ನು ಸುಮಾರು 12 ಗಂಟೆಗೆ ಕರೆಸಲಾಗಿತ್ತು ಆದರೆ ನಂತರ ಅವರನ್ನು ಅಪಹರಿಸಲಾಯಿತು. ಅವರ ಮನೆಯವರೆಲ್ಲರೂ ಆತಂಕಕ್ಕೀಡಾಗಿ ನಂತರ ಪೊಲೀಸ್ ದೂರು ದಾಖಲಿಸಿದರು" ಎಂದು ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಶುವೈದ್ಯರ ತಂದೆ ಲಿಖಿತ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ವರನ ಅಪಹರಣ ಅಥವಾ ಪಕಡ್ವಾ ವಿವಾಹ್ ಪದ್ಧತಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿದ್ದು ಅವಿವಾಹಿತ ಯುವಕರನ್ನು ಅಪಹರಿಸಿ ನಂತರ ಬೆದರಿಸಿ ವಿವಾಹವಾಗುವಂತೆ ಬಂದೂಕು ತೋರಿಸಿ ಬಲವಂತಪಡಿಸಲಾಗುತ್ತದೆ. ಪ್ರಮುಖವಾಗಿ ಆರ್ಥಿಕವಾಗಿ ಸಬಲರಾಗಿರುವ ಯುವಕರನ್ನು ವಧುಗಳ ಕುಟುಂಬ ಅಪಹರಿಸಿ ಕೆಲವೊಮ್ಮೆ ಥಳಿಸಿ ವಿವಾಹಕ್ಕೆ ಅವರನ್ನು ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕೆಲ ವರ್ಷಗಳ ಹಿಂದೆ ಬೊಕಾರೋ ಉಕ್ಕು ಸ್ಥಾವರದಲ್ಲಿ ಜೂನಿಯರ್ ಮ್ಯಾನೇಜರ್ ಆಗಿರುವ 29 ವರ್ಷದ ವಿನೋದ್ ಕುಮಾರ್ ಎಂಬವರನ್ನು ಥಳಿಸಿ ಪಾಟ್ನಾದ ಪಂಡರಕ್ ಎಂಬಲ್ಲಿ ಮಹಿಳೆಯೊಬ್ಬಳೊಂದಿಗೆ ವಿವಾಹಕ್ಕೆ ಬಲವಂತಪಡಿಸಲಾಗಿತ್ತು. ವರನ ವೇಷಭೂಷಣ ತೊಟ್ಟಿದ್ದ ವಿನೋದ್ ಮದುವೆಯನ್ನು ನಿಲ್ಲಿಸುವಂತೆ ಪರಿಪರಿಯಾಗಿ ಬೇಡುತ್ತಿರುವ ವೀಡಿಯೋ ವೈರಲ್ ಆಗಿತ್ತಲ್ಲದೆ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.