ಮಂಗಳೂರು: ಅಭಿವೃದ್ಧಿ ಕುರಿತಂತೆ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಯು.ಟಿ. ಖಾದರ್ ಸಭೆ

ಮಂಗಳೂರು, ಜೂ.15:ನೂತನ ಉಳ್ಳಾಲ ತಾಲೂಕು ವ್ಯಾಪ್ತಿಯ ತೊಕ್ಕೊಟ್ಟುವಿನಿಂದ ಮುಡಿಪು ತನಕ ಚತುಷ್ಪಥ ರಸ್ಥೆಯ ಅಭಿವೃದ್ಧಿ, ಸ್ವಚ್ಛತೆ, ಮೂಲಭೂತ ಸೌಕರ್ಯಗಳು ಹಾಗೂ ಕಾನೂನು ಸುವ್ಯವಸ್ಥೆ ಕುರಿತಂತೆ ಯೆನೆಪೊಯ, ಕೆ.ಎಸ್.ಹೆಗ್ಡೆ, ಕಣಚೂರು,ಫಾದರ್ ಮುಲ್ಲರ್ಸ್, ಪಿ.ಎ.ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಮಂಗಳೂರು ವಿಶ್ವವಿದ್ಯಾನಿಲಯ, ಇನ್ಬೋಸಿಸ್, ಕೆಎಸ್ಸಾರ್ಪಿ ಹಾಗೂ ಈ ವ್ಯಾಪ್ತಿಗೆ ಒಳಪಡುವ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರಿಸರ ಕಾಳಜಿಯ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಜೊತೆ ಶಾಸಕ ಯು.ಟಿ. ಖಾದರ್ ಬುಧವಾರ ಸಭೆ ನಡೆಸಿ ಚರ್ಚಿಸಿದರು.
ಮಂಗಳೂರು ನಗರದ ಬಳಿಕ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ ಇದಾಗಿದೆ. ಮುಡಿಪುವಿನಿಂದ ಕಂಬಳಪದವು ತನಕ ಹಾಗೂ ನಾಟೆಕಲ್ನಿಂದ ಚೆಂಬುಗುಡ್ಡೆಯ ತನಕ ಚತುಷ್ಪಥ ರಸ್ಥೆ ನಿರ್ಮಾಣವಾಗಿದೆ. ನಾಟೆಕಲ್ನಿಂದ ಅಸೈಗೋಳಿ ತನಕ 10 ಕೋ.ರೂ. ಹಾಗೂ ಚೆಂಬುಗುಡ್ಡೆಯಿಂದ ತೊಕ್ಕೊಟ್ಟು ಜಂಕ್ಷನ್ ಅಭಿವೃದ್ಧಿಗಾಗಿ 12 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಖಾದರ್ ತಿಳಿಸಿದರು.
ಸರಕಾರ ಅಥವಾ ಜನಪ್ರತಿನಿಧಿಗಳು ರಸ್ತೆಗಳನ್ನು ನಿರ್ಮಾಣ ಮಾಡಬಹುದು. ಆದರೆ ಅದನ್ನು ವ್ಯವಸ್ಥಿತ ರೀತಿಯಲ್ಲಿ ಸ್ವಚ್ಛತೆಯಿಂದ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆ. ಹಾಗಾಗಿ ಈಗಾಗಲೆ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಈ ಎಲ್ಲಾ ವಿದ್ಯಾಸಂಸ್ಥೆ ಹಾಗೂ ವಾಣಿಜ್ಯ ಸಂಸ್ಥೆ, ಪೋಲಿಸ್ ಇಲಾಖೆಯ ಅಧಿಕಾರಿಗಳು, ತಾಪಂ ಇಒ, ಎಲ್ಲಾ ಗ್ರಾಪಂ, ಪಟ್ಟಣ ಪಂಚಾಯತ್, ಪುರಸಭೆ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಖಾದರ್ ಹೇಳಿದರು.
ಇದರ ಬಗ್ಗೆ ಜಾಗೃತಿ ಮೂಡಿಸಲು ಜನ ಸೇವಾ ಟ್ರಸ್ಟ್ನ ಶೀನ ಶೆಟ್ಟಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ತೊಕ್ಕೊಟ್ಟುವಿನಿಂದ ಮುಡಿಪು ತನಕ ರಸ್ತೆಯ ಇಕ್ಕೆಲಗಳಲ್ಲೂ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ನೆಡುವುದರ ಮೂಲಕ ರಸ್ತೆಯ ಸೌಂದರ್ಯ ಇನ್ನಷ್ಟು ಹೆಚ್ಚಿಸಲು ನೀಲಿ ನಕಾಶೆ ತಯಾರಿಸಲು ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಈ ಭಾಗದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಜನರು ಆಗಮಿಸುತ್ತಿದ್ದು ಅವರ ಸೌಲಭ್ಯಕ್ಕಾಗಿ ಸುಸಜ್ಜಿತ ಪಾರ್ಕಿಂಗ್ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಕೂಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಓಡಾಡುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಸಿ ಅದನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಮೋನಿಟರ್ ಮಾಡುವಂತಹ ವ್ಯವಸ್ಥೆಗೆ ಯೋಜನೆ ರೂಪಿಸಲಾಗುವುದು. ಅಗತ್ಯಬಿದ್ದಲ್ಲಿ ಪೊಲೀಸ್ ಔಟ್ ಪೋಸ್ಟ್ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಖಾದರ್ ತಿಳಿಸಿದರು.
ಸಭೆಯಲ್ಲಿ ಕೆ.ಎಸ್.ಹೆಗ್ಡೆ ಮುಖ್ಯಸ್ಥ ವಿಶಾಲ್ ಹೆಗ್ಡೆ,ಯೆನೆಪೋಯ ಸಂಸ್ಥೆಯ ಮುಖ್ಯಸ್ಥ ಫರ್ಹಾದ್ ಯೆನೆಪೊಯ, ಕಣಚೂರು ವಿದ್ಯಾ ಸಂಸ್ಥೆಯ ಮುಖ್ಯಸ್ಥ ಕಣಚೂರು ಮೋನು, ಇನ್ಬೋಸಿಸ್‌ನಿಂದ ವಾಸುದೇವ ಕಾಮತ್, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ದಿನಕರ್ ಶೆಟ್ಟಿ, ಮಂಗಳೂರು ನಗರ ಸಂಚಾರ ಎಸಿಪಿ ಗೀತಾ ಕುಲಕರ್ಣಿ, ತಾಪಂ ಇಒ ಜಿ.ನಾಗರಾಜ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಉಪಸ್ಥಿತರಿದ್ದರು.