ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಓರ್ವ ಸಾವು

ಪುತ್ತೂರು: ದ್ವಿಚಕ್ರ ವಾಹನಗಳೆರಡರ ನಡುವೆ ಢಿಕ್ಕಿ ಸಂಭವಿಸಿ ಸವಾರರೊಬ್ಬರು ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ನೆಹರುನಗರ ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೇವಸ್ಯ ನಿವಾಸಿಯಾಗಿದ್ದು, ಪುತ್ತೂರು ನಗರದ ಶ್ರೀ ಮಹಮ್ಮಾಯಿ ದೇವಸ್ಥಾನದ ಬಳಿ ಶ್ರೀ ದುರ್ಗಾ ಹೆಸರಿನ ಕೀ ಮತ್ತು ಸ್ಟವ್ ರಿಪೇರಿ ಅಂಗಡಿ ನಡೆಸುತಿದ್ದ ರವೀಂದ್ರ (60)ಮೃತಪಟ್ಟವರು.
ರವೀಂದ್ರ ಅವರು ನೆಹರು ನಗರ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಚಲಾಯಿಸಿಕೊಂಡು ಬರುತಿದ್ದ ಆಕ್ಟಿವಾ ಮತ್ತು ಪುತ್ತೂರು ಪೇಟೆಯಿಂದ ನೆಹರುನಗರ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ನೆಹರುನಗರ ಸಮೀಪದ ಮಾಸ್ಟರ್ ಪ್ಲಾನರಿ ಎದುರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರವೀಂದ್ರ ಅವರು ಮೃತಪಟ್ಟಿದ್ದಾರೆ. ಬೈಕ್ ಸವಾರ ಕೂಡ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.