ಯು.ಕೆ.ಇಬ್ರಾಹಿಂ ಹಾಜಿ ಮತ್ತು ಮಮ್ಮುಂಞಿ ಹಾಜಿ ಸ್ಮರಣಾರ್ಥ ವಿದ್ಯಾರ್ಥಿ ವೇತನ ಬಿಡುಗೆಡೆಗೊಳಿಸಿದ ಕಮ್ಯೂನಿಟಿ ಸೆಂಟರ್

ಉಳ್ಳಾಲ: ಹಿರಿಯರಲ್ಲಿದ್ದ ಸಮುದಾಯ ಕಾಳಜಿ ಮತ್ತು ದೂರದೃಷ್ಠಿಯ ಯೋಜನೆಗಳನ್ನು ನವ ಪೀಳಿಗೆಯಲ್ಲಿ ಉತ್ತೇಜಿಸಲು ಕಮ್ಯೂನಿಟಿ ಸೆಂಟರ್ ಇಬ್ಬರು ಮಹನೀಯರ ಸ್ಮರಣಾರ್ಥ ವಿದ್ಯಾರ್ಥಿ ವೇತನವನ್ನು ನೀಡಲು ಉದ್ದೇಶಿಸಿದೆ. ಉಳ್ಳಾಲದಲ್ಲಿ ದೂರದೃಷ್ಠಿಯ ಸಂಕಲ್ಪದೊಂದಿಗೆ ಹಲವಾರು ಶೈಕ್ಷಣಿಕ ಮತ್ತು ಸಾಮಾಜಿಕ ಕೇಂದ್ರಗಳ ನಿರ್ಮಾಣಕ್ಕೆ ಕಾರಣರಾದ ಮತ್ತು ಸಮರ್ಥ ನೇತೃತ್ವ ನೀಡಿದ್ದ ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷರಾದ 'ಮರ್ಹೂಂ ಯು.ಕೆ. ಇಬ್ರಾಹಿಂ ಹಾಜಿ ಮೆಮೋರಿಯಲ್ ವಿದ್ಯಾರ್ಥಿ ವೇತನ' ನಿಧಿಯನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷರಾದ ಅಬ್ದುಲ್ ರಶೀದ್ ಹಾಜಿ ಉಳ್ಳಾಲ ಬಿಡುಗಡೆಗೊಳಿಸಿದರು.
ಪುತ್ತೂರಿನಲ್ಲಿ ಶೈಕ್ಷಣಿಕ ಪ್ರಗತಿಗೆ ತನ್ನ ಉದಾತ್ತ ಕೊಡುಗೆ ನೀಡಿದ, ಕಲಿಯಿರಿ-ಕಲಿಸಿರಿ ಎಂಬ ಘೋಷಣೆಯ ಮೂಲಕ ತಾಲೂಕಿನಲ್ಲಿ ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಿರುವ ಮರ್ಹೂಂ ಮಮ್ಮುಂಞಿ ಹಾಜಿಯವರ ಹೆಸರಿನ ವಿದ್ಯಾರ್ಥಿ ವೇತನದ ಘೋಷಣಾ ಪತ್ರವನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಮುಖ್ತಾರ್ ಪಠಾಣ ಮತ್ತು ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಜಮಾಲ್ ಸಿದ್ದೀಕಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಆಡಳಿತ ಸಮಿತಿ ಅಧ್ಯಕ್ಷರಾದ ರಶೀದ್ ಹಾಜಿ ಉಳ್ಳಾಲ್ ಮಾತನಾಡಿ, "ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಸುಧಾರಣೆ ತರಲು ಕಮ್ಯೂನಿಟಿ ಸೆಂಟರ್ ಅತ್ಯುತ್ತಮ ಮಾದರಿಯನ್ನು ಸಮಾಜದ ಮುಂದಿಡುತ್ತಿವೆ. ಇದೊಂದು ಇತರರಿಗೂ ಪ್ರೇರಣೆಯಾಗುವ ಪದ್ದತಿಯಾಗಿದೆ. ನಮ್ಮ ಸಮಿತಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸಮಾಜ ಮುಖಿ ಚಟುವಟಿಕೆಗಳಿಗೆ ಆಕರ್ಷಿತರಾಗಿದ್ದೇವೆ. ಈಗಾಗಲೇ ರೂ. 2 ಕೋಟಿಯಷ್ಟು ಹಣವನ್ನು ನಾವು ಉಳ್ಳಾಲ ದರ್ಗಾ ವತಿಯಿಂದ ಶೈಕ್ಷಣಿಕ ವೆಚ್ಚಕ್ಕಾಗಿ ಭರಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನ ನೀಡುವ ಇರಾದೆಯನ್ನೂ ಹೊಂದಿದ್ದೇವೆ. ಜಿಲ್ಲೆಯ ಸಾಧಕರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಕೊಡುವ ನಿರ್ಧಾರವನ್ನಿಟ್ಟುಕೊಂಡಿದ್ದೇವೆ. ಭವಿಷ್ಯದ ತಲೆಮಾರು ಹಿರಿಯರನ್ನು ಸ್ಮರಿಸುವ ಕೃತಜ್ಞತಾ ಮನೋಭಾವ ಇರುವ ಸಮಾಜವನ್ನು ಕಾಣುವ ಕಮ್ಯೂನಿಟಿ ಸೆಂಟರ್ ನ ಆಶಯದೊಂದಿಗೆ ನಾವು ಸದಾ ಜೊತೆಗಿರುವೆವು" ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ಸ್ ನ ವಕ್ತಾರರಾದ ಫಾರೂಕ್ ಉಳ್ಳಾಲ್ ಮಾತನಾಡಿ, ಉನ್ನತ ವ್ಯಾಸಾಂಗ ಮಾಡಿ ಅನುಕೂಲತೆಯೊಂದಿಗೆ ತಮ್ಮ ಪಾಡಿಗೆ ಇರುವ ಪೀಳಿಗೆಯನ್ನು ಸಮಾಜ ಮತ್ತು ಸಮುದಾಯ ಕಾಳಜಿಯ ಜೊತೆಗೆ ಮೌಲ್ಯಧಾರಿತ ಬದುಕು ರೂಪಿಸಲು ನಾವು ಉತ್ತೇಜಿಸಬೇಕು. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು, ಈ ನಿಟ್ಟಿನಲ್ಲಿ ಕಮ್ಯೂನಿಟಿ ಸೆಂಟರ್ ರಚನಾತ್ಮಕ ಕಾರ್ಯತಂತ್ರಗಳನ್ನು ಅಳವಡಿಸಿದ್ದು ಶ್ಲಾಘನೀಯ ಎಂದರು.
ಮರ್ಹೂಂ ಮಮ್ಮುಂಞಿ ಹಾಜಿಯವರ ಸ್ಮರಣಾರ್ಥ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಮೈನಾರಿಟಿ ಮೋರ್ಚಾದ ಅಧ್ಯಕ್ಷರಾದ ಜಮಾಲ್ ಸಿದ್ದೀಕಿ, "ರಾಷ್ಟ್ರದ ಯುವಪೀಳಿಗೆಯನ್ನು ಸೆಂಟರ್ ಸರಿಯಾದ ದಿಕ್ಕಿನಲ್ಲಿ ತರಬೇತುಗೊಳಿಸುತ್ತಿದೆ, ಈ ಯೋಚನೆಯು ದೇಶದಾದ್ಯಂತ ಹರಡಲಿ" ಎಂದು ಶುಭ ಹಾರೈಸಿದರು.
ವಿದ್ಯಾರ್ಥಿ ವೇತನದ ನಿಬಂಧನೆಯ ಪ್ರಕಾರ ಪಿಯುಸಿ ಮತ್ತು ಪಿಯುಸಿ ನಂತರದ ವಿದ್ಯಾರ್ಥಿಗಳು ಈ ಇಬ್ಬರೂ ಮಹನೀಯರಲ್ಲಿ ಒಬ್ಬರ ಕುರಿತು ಪ್ರಬಂಧ ಬರೆಯಬೇಕು ಅಥವಾ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ಕೌನ್ಸಿಲರ್ ಪರಿಚಯಿಸುವ ಮಹನೀಯರ ಕುರಿತಂತೆ ತಮಗೆ ತಿಳಿದ ಜ್ಞಾನವನ್ನು ಹಂಚಬೇಕು. ಒಟ್ಟು 50 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಸೆಂಟರ್ ಆಯ್ಕೆ ಮಾಡಲಿದೆ.
ಮಹನೀಯರನ್ನು ಸ್ಮರಿಸಿರಿ ವಿದ್ಯಾರ್ಥಿ ವೇತನ ಪಡೆಯಿರಿ ಎನ್ನುವ ಈ ಎರಡನೆಯ ಯೋಜನೆಯ ಕೌನ್ಸಿಲಿಂಗ್ ಜೂನ್ 17 ನೇ ತಾರೀಕಿನಿಂದ ಮಂಗಳೂರು, ಪುತ್ತೂರು, ವಿಟ್ಲ ಕಮ್ಯೂನಿಟಿ ಸೆಂಟರ್ ನಲ್ಲಿ ಜೂನ್ 30 ರವರೆಗೆ ನಡೆಯಲಿದೆ. ಈ ಇಬ್ಬರು ಮಹನೀಯರ ಹೆಸರಿನಲ್ಲಿ ಪ್ರಬಂಧ ಬರೆದು ಸೆಂಟರಿಗೆ ತಲುಪಿಸಲು ಜೂನ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ.
ಯೋಜನೆಯ ಘೋಷಣಾ ಪತ್ರದ ಬಿಡುಗಡೆ ಮಂಗಳೂರಿನ ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾದ ಉಪಾಧ್ಯಕ್ಷ ರುಗಳಾದ ಯು.ಕೆ.ಮೋನು ಇಸ್ಮಾಯಿಲ್, ಹಾಜಿ ಬಾವ ಮುಹಮ್ಮದ್, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ.ಕೆ.ಮೊಯ್ದಿನ್ ಹಾಜಿ, ಸಮಿತಿ ಸದಸ್ಯರುಗಳಾದ ಹಮ್ಮಬ್ಬ ಕೋಟೆಪುರ, ಇಬ್ರಾಹಿಂಹಾಜಿ, ಅಲಿಮೋನು, ಹಸೈನಾರ್, ಹಸನಬ್ಬ ಉಪಸ್ಥಿತರಿದ್ದರು.
ಬೆಂಗಳೂರಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾದ್ಯಕ್ಷರಾದ ಅಬ್ದುಲ್ ಸಲಾಂ ಮತ್ತು ಮೇಥ್ಯು, ರಾಜ್ಯ ಉಪಾದ್ಯಕ್ಷರಾದ ನೂರ್ ಬಾಷಾ ಮತ್ತು ಫೀರ್ ಝಾದೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಾಜಿ ರಾಜ್ಯಾಧ್ಯಕ್ಷರಾದ ಪೀರ್ ಹುಸೈನ್, ಕೆ.ಎಂ.ಡಿ.ಸಿ ನಿರ್ದೇಶಕರಾದ ಸಿರಾಜುದ್ದೀನ್, ಶಿಕ್ಷಣ ತಜ್ಞರಾದ ಮುಹಮ್ಮದ್ ಬ್ಯಾರಿ, ಕಮ್ಯೂನಿಟಿ ಸೆಂಟರ್ ನ ಮುನೀರ್ ವಿಟ್ಲ, ಸಂಶುದ್ದೀನ್ ಬೈರಿಕಟ್ಟೆ, ಇಮ್ತಿಯಾಝ್ ಪಾರ್ಲೆ ಮತ್ತು ಹನೀಫ್ ಪುತ್ತೂರು ಉಪಸ್ಥಿತರಿದ್ದರು.
ಈ ಇಬ್ಬರು ಮಹನೀಯ ಹೆಸರಿನಲ್ಲಿ ಪ್ರಬಂಧ ಒಂದು ಪುಟಕ್ಕಿಂತ ಹೆಚ್ಚಿರಬೇಕು. ಖಡ್ಡಾಯವಾಗಿ ಪೇಪರಿನಲ್ಲೇ ಬರೆದು ಪಿಡಿಎಫ್ ಅಥವಾ ಸ್ಕ್ಯಾನ್ ಮಾಡಿ ಕಳುಹಿಸಬೇಕು. ಅಥವಾ ನೇರವಾಗಿ ಸೆಂಟರಿಗೆ ತಲುಪಿಸಬಹುದು. ಇಂಗ್ಲೀಷ್, ಕನ್ನಡ, ಬ್ಯಾರಿ ಭಾಷೆಯಲ್ಲೂ ಬರೆಯಬಹುದು ಎಂದು ಕಮ್ಯೂನಿಟಿ ಸೆಂಟರ್ ತಿಳಿಸಿದೆ.
ಪಿಡಿಎಫ್ ಅಥವಾ ಸ್ಕ್ಯಾನ್ ಮಾಡಿ ಕಳುಹಿಸುವ ಮೇಲ್ ಐಡಿ pccputtur@gmail.com ಮತ್ತು ವಾಟ್ಸಾಪ್ ನಂ- 7259115313, 8867073888, 9845899107.
ನೇರವಾಗಿ ತಲುಪಿಸುವ ವಿಳಾಸ-: ಪುತ್ತೂರು ಕಮ್ಯೂನಿಟಿ ಸೆಂಟರ್, ಶಾಲಿಮಾರ್ ಕಾಂಪ್ಲೆಕ್ಸ್, ಮೂರನೇ ಮಹಡಿ, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಮುಂಬಾಗ, ಪುತ್ತೂರು.
ಮಂಗಳೂರು ಕಮ್ಯೂನಿಟಿ ಸೆಂಟರ್, ಇನ್ಸೆಪ್ಟ್ರಾ ಸಿಸ್ಟಂ, ಮೂರನೇ ಮಹಡಿ, ಪ್ರೆಸಿಡೆಂನ್ಸಿ ಝೋನ್, ಬೆಂದೂರ್ ವೆಲ್, ಮಂಗಳೂರು.
ವಿಟ್ಲ ಕಮ್ಯೂನಿಟಿ ಸೆಂಟರ್, ಹಿರಾ ಟವರ್, ಎರಡನೇ ಮಹಡಿ, ಸರ್ವಿಸ್ ಬಸ್ಸ್ ನಿಲ್ದಾಣ, ವಿಟ್ಲ.