ಉಡುಪಿ: ಯಕ್ಷಶಿಕ್ಷಣ ಗುರುಗಳ ಸಮಾಲೋಚನಾ ಸಭೆ

ಉಡುಪಿ, ಜೂ.15: ಉಡುಪಿ ವಿಧಾನಸಭಾ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ನ ಗುರುಗಳ ಸಮಾಲೋಚನಾ ಸಭೆ ಬುಧವಾರ ಸಂಜೆ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು.
20 ಮಂದಿ ಯಕ್ಷಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ವರ್ಷ ಉಡುಪಿ ವ್ಯಾಪ್ತಿಯ ಸುಮಾರು 50 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ನಡೆಸಲು ಉದ್ದೇಶಿಸಲಾಗಿದೆ.
ಕಾರ್ಯದರ್ಶಿ ಮುರಲಿ ಕಡೆಕಾರ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯಕ್ಷಶಿಕ್ಷಣ ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಿ ಈ ಅಭಿಯಾನ ಯಶಸ್ವಿಗೊಳ್ಳುವಲ್ಲಿ ಎಲ್ಲಾ ಗುರುಗಳು ಸಹಕರಿಸಬೇಕೆಂದು ವಿನಂತಿಸಿದರು. ಗುರುಗಳಿಗೆ ಶಾಲೆಗಳನ್ನು ಹಂಚಿಕೆ ಮಾಡಿ ಜೂನ್ 25ರ ಒಳಗೆ ತರಗತಿಗಳನ್ನು ಪ್ರಾರಂಭಿಸಬೇಕೆಂದು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರೊ.ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ ಹಾಗೂ ಮಂಜುನಾಥ ಉಪಸ್ಥಿತರಿದ್ದರು. ಟ್ರಸ್ಟ್ನ ವಿಶ್ವಸ್ಥರಾದ ಎಸ್.ವಿ. ಭಟ್ ಸ್ವಾಗತಿಸಿದರು.
Next Story