ಬೆಂಗಳೂರು | ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.15: ಸಾಕು ನಾಯಿಯ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರು ಚಾಲಕ ಶಿವಕುಮಾರ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಜೂ. 4 ರಂದು ಆಂಧ್ರಹಳ್ಳಿಯ ಶ್ರೀನಿವಾಸ ದೇವಸ್ಥಾನದ ಹತ್ತಿರ ಹರೀಶ್ ಎನ್ನುವವರು ತಮ್ಮ ಸಾಕು ನಾಯಿ ಜೊತೆ ಬಂದಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ನಾಯಿಗೆ ಢಿಕ್ಕಿ ಹೊಡೆದಿದ್ದು ಚಾಲಕ ಶಿವಕುಮಾರ್ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು, ಕೊನೆಗೆ ಕಾರು ನಿಲ್ಲಿಸಿ ಶಿವಕುಮಾರ್ ಕಾರಿನಲ್ಲಿಯೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು.
ಘಟನೆಯಲ್ಲಿ ನಾಯಿಯ ಎದೆಗೆ ಮತ್ತು ಬಲಗಾಲಿಗೆ ತೀವ್ರ ಗಾಯಗಳಾಗಿದ್ದು, ಮಾಲಕ ಹರೀಶ್ ಆರೈಕೆ ಮಾಡಿದ್ದಾರೆ. ಘಟನೆ ಸಂಬಂಧ ಕಾರು ಚಾಲಕ ಶಿವಕುಮಾರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
Next Story





