ಕಾರ್ಕಳ: ಜೂ.19ರಂದು ಯಕ್ಷರಂಗಾಯಣದಿಂದ ನಾಟಕ
ಉಡುಪಿ: ಕರ್ನಾಟಕದಲ್ಲಿ ರಂಗಾಯಣದ ಆರನೇ ಶಾಖೆಯಾಗಿ ಇತ್ತೀಚೆಗೆ ಕಾರ್ಕಳದಲ್ಲಿ ಪ್ರಾರಂಭಗೊಂಡಿರುವ ಯಕ್ಷ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತನ್ನ ಚೊಚ್ಚಲ ನಾಟಕವಾಗಿ ಇದೇ ಜೂ.೧೯ರಂದು ರವಿವಾರ ಕಾರ್ಕಳದ ಭುವನೇಂದ್ರ ಕಾಲೇಜು ಸಭಾಂಗಣದಲ್ಲಿ ‘ಅಮರ ಕ್ರಾಂತಿ ಸ್ವಾತಂತ್ರ್ಯ ಹೋರಾಟ-೧೮೩೭’ನ್ನು ಪ್ರದರ್ಶಿಸಲಿದೆ ಎಂದು ನಾಟಕದ ನಿರ್ದೇಶಕರೂ, ಯಕ್ಷ ರಂಗಾಯಣದ ನಿರ್ದೇಶಕರೂ ಆಗಿರುವ ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದ ಭಾಗವಾಗಿ ಬ್ರಿಟಿಷರ ವಿರುದ್ಧ ೧೮೩೭ರಲ್ಲಿ ನಡೆದ ಸುಳ್ಯ ದಂಗೆಗೆ ಸಂಬಂಧಿಸಿದ ೫೫ ನಿಮಿಷಗಳ ಈ ನಾಟಕವನ್ನು ಸಂಜೆ ೬:೦೦ರಿಂದ ಪ್ರದರ್ಶಿಸಲಾಗುವುದು ಎಂದರು. ನಾಟಕವನ್ನು ಹಿರಿಯ ಸಾಹಿತಿಗಳಾದ ಡಾ.ಪ್ರಭಾಕರ ಶಿಶಿಲ ರಚಿಸಿದ್ದಾರೆ.
ಕಾರ್ಯಕ್ರಮವನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಡಾ.ಪ್ರಭಾಕರ ಶಿಶಿಲ ಅವರು ‘ಕರಾವಳಿ ಸ್ವಾತಂತ್ರ್ಯ ಹೋರಾಟದ ನೆನಪು’ ವಿಷಯದ ಕುರಿತು ಮಾತನಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ.ಕೋಟ್ಯಾನ್ ಉಪಸ್ಥಿತರಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀವನ್‌ರಾಂ ಸುಳ್ಯ ವಹಿಸಲಿದ್ದಾರೆ.
ಯಕ್ಷ ರಂಗಾಯಣದಿಂದ ಸಿದ್ಧಗೊಂಡ ಮೊದಲ ಪ್ರಯೋಗ ಇದಾಗಿದ್ದು, ತಂಡದಲ್ಲಿ ನೀನಾಸಂ ರಂಗ ಪದವೀಧರರು ಸೇರಿದಂತೆ ೧೫ ಮಂದಿ ಅತಿಥಿ ಕಲಾವಿದರಿದ್ದಾರೆ. ಬಳಿಕ ತಂಡ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ನೆಲದಲ್ಲಿ ಪ್ರದರ್ಶನವನ್ನು ನೀಡಲು ರಂಗ ಪಯಣವನ್ನು ಪ್ರಾರಂಭಿಸಲಿದೆ ಎಂದು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಿವರಿಸಿದರು.
ಭಾರತದಲ್ಲಿ ೧೮೫೭ರಲ್ಲಿ ನಡೆದ ಸಿಪಾಯಿ ದಂಗಗೆ ಮೊದಲೇ ಸುಳ್ಯ ಹಾಗೂ ಮಂಗಳೂರಿನಲ್ಲಿ ಬ್ರಿಟಿಷರು ಹೇರಿದ ಕ್ರೂರ ಕಂದಾಯ ನೀತಿಯ ವಿರುದ್ಧ ರೈತರ ಬಂಡಾಯ ನಡೆದಿತ್ತು. ಸುಳ್ಯದ ಕೆದಂಬಾಡಿ ರಾಮಗೌಡರ ನೇತೃತ್ವದಲ್ಲಿ ಹುಲಿಕಡಿದ ನಂಜಯ್ಯ, ಗುಡ್ಡೆಮನೆ ಅಪ್ಪಯ್ಯ ಮುಂತಾದವರು ಸೇರಿದಂತೆ ಸುಮಾರು ೧೫ಸಾವಿರ ಮಂದಿ ಭಾಗವಹಿಸಿದ್ದ ಬಂಡಾಯ, ೧೮೩೭ ಮಾ.೩೦ ರಂದು ಸುಳ್ಯದಲ್ಲಿ ಪ್ರಾರಂಭಗೊಂಡು ಎ.೫ರಂದು ಮಂಗಳೂರಿನಲ್ಲಿ ಬ್ರಿಟಿಷರ ಧ್ವಜ ಕೆಳಗಿಳಿಸುವ ಮೂಲಕ ಮುಕ್ತಾಯಗೊಂಡಿತ್ತು. ಬಳಿಕ ಬ್ರಿಟಿಷರು ಬಂಡಾಯದ ನಾಯಕರನ್ನು ಸೆರೆ ಹಿಡಿದು ಗಲ್ಲುಶಿಕ್ಷೆ, ಕಾರಾಗೃಹ ವಾಸ ವಿಧಿಸಿದ್ದರು.