ಪರಿಷತ್ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ: ನಳಿನ್ ಕುಮಾರ್ ಕಟೀಲ್
''ಕಾಂಗ್ರೆಸ್ ಗೆ ಕೇಡುಗಾಲ ಬಂದಿದೆ''

ನಳಿನ್ ಕುಮಾರ್ ಕಟೀಲ್
ಚಾಮರಾಜನಗರ : 'ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತಗಳು ಸ್ಥಿರವಾಗಿವೆ. ಜೆಡಿಎಸ್ ಮತಗಳು ಬಿಜೆಪಿಗೆ ಬಂದಿವೆ. ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತುರ್ತುಪರಿಸ್ಥಿತಿ ಹೇರಿದ್ದು ತಮ್ಮದೇ ಪಾರ್ಟಿ ಎಂಬುದನ್ನು ಸಿದ್ದರಾಮಯ್ಯ ಯೋಚನೆ ಮಾಡಬೇಕು. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದು ಅವರ ಪಾರ್ಟಿ. ಜಾರಿ ನಿರ್ದೇಶನಾಲಯ ಸ್ವಾಯತ್ತ ಸಂಸ್ಥೆಯಾಗಿದೆ. ಅದು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ತೆಗೆದುಕೊಂಡಿರುವ ತೀರ್ಮಾನಕ್ಕೆ ವಿರುದ್ಧವಾಗಿ ನಡವಳಿಕೆ ತೋರಿಸುವಂತಹದ್ದು ಸಿದ್ದರಾಮಯ್ಯ ಅವರ ನಡವಳಿಕೆಯಾಗಿದೆ. ದೇಶದಲ್ಲಿ ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದ್ದಾರೆ, ಕಾಂಗ್ರೆಸ್ ಗೆ ಕೇಡುಗಾಲ ಬಂದಿದೆ' ಎಂದು ಎಂದು ವಾಗ್ದಾಳಿ ನಡೆಸಿದರು.
'ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನೆರ್ ರಚನೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ' ಎಂದರು.
'ಕಾಂಗ್ರೆಸ್ ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಕಾನೂನು ಮೇಲೆ ನಂಬಿಕೆ ಇಲ್ಲ. ಕಾನೂನಿನ ಆಧಾರದ ಮೇಲೆ ಇಡಿ ವಿಚಾರಣೆ ಮಾಡುತ್ತಿದೆ. ಹಿಂದೆ ನರೇಂದ್ರಮೋದಿ, ಅಮಿತ್ ಷಾ ವಿರುದ್ಧವೂ ಈ.ಡಿ ತನಿಖೆ ಮಾಡಿತ್ತು, ಅಂದು ಯಾರೂ ಹೋರಾಟ ಮಾಡಿರಲಿಲ್ಲ. ವಿಚಾರಣೆ ಮಾಡೋದು ಕಾನೂನಿನ ಧರ್ಮ, ಆದರೆ ಕಾಂಗ್ರೆಸ್ ಬೇರೆ ಬೇರೆ ಕಾರಣಗಳಿಗೆ ಹೋರಾಟ ಮಾಡುತ್ತಿದೆ ಎಂದರು.







