ಗುಂಡು ಹಾರಿಸಿಕೊಂಡು ಕರ್ತವ್ಯ ನಿರತ ಪೊಲೀಸ್ ಪೇದೆ ಆತ್ಮಹತ್ಯೆ

ಕಿರಣ್ ಕೊಪ್ಪದ- (ಆತ್ಮಹತ್ಯೆ ಮಾಡಿಕೊಂಡ ಪೇದೆ )
ಗದಗ, ಜೂ.16: ಪೊಲೀಸ್ ಇಲಾಖೆಯ ಮುಖ್ಯ ಪೇದೆವೊಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲಾಡಳಿತ ಭವನದ ಖಜಾನೆ ಕಚೇರಿಯಲ್ಲಿ ನಡೆದಿದೆ.
ಡಿ.ಆರ್ ಪೊಲೀಸ್ ಪೇದೆ ಕಿರಣ್ ಕೊಪ್ಪದ ಆತ್ಮಹತ್ಯೆ ಮಾಡಿಕೊಂಡವರು ಎಂದು ವರದಿಯಾಗಿದೆ.
ಜಿಲ್ಲಾಡಳಿತ ಭವನದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡನೆ ಪಾಳಿ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ರೈಫಲ್ ಮೂಲಕ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.
ಮೃತ ಪೇದೆ ಕಿರಣ್, ಕಳೆದ 20 ವರ್ಷಗಳಿಂದ ಡಿ.ಆರ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಐದಾರು ವರ್ಷಗಳಿಂದ ಸಂಸಾರದಲ್ಲಿ ಕಲಹ ಏರ್ಪಟ್ಟಿದ್ದು, ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದರು. ಬರುವ ಆದಾಯದಲ್ಲಿ ಅರ್ಧದಷ್ಟು ಪತ್ನಿ ಹಾಗೂ ಮಕ್ಕಳ ಜೀವನೋಪಾಯಕ್ಕೆ ಕೊಡುವಂತೆ ಕೋರ್ಟ್ ಆದೇಶವಾಗಿತ್ತು.
ಇದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.







