ಜೂ.18ರಂದು ಉಡುಪಿ ಜಿಲ್ಲಾ ಜಾನಪದ ಪರಿಷತ್‌ನಿಂದ ‘ಜಾನಪದ ಉತ್ಸವ 2022’
ಉಡುಪಿ : ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕವು ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜೂ.೧೮ರಂದು ಉಡುಪಿ ಜಿಲ್ಲಾ ಮಟ್ಟದ ಜಾನಪದ ಉತ್ಸವ-೨೦೨೨ನ್ನು ಆಯೋಜಿಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಶನಿವಾರ ಅಪರಾಹ್ನ ೩:೩೦ರಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ರಂಗಕರ್ಮಿ ಹಾಗೂ ಸಂಘಟಕ ಪ್ರದೀಪಚಂದ್ರ ಕುತ್ಪಾಡಿ ಇವರಿಗೆ ‘ಜಾನಪದ ಪ್ರಶಸ್ತಿ’ ಪ್ರದಾನ ಮಾಡಲಾಗು ವುದು. ಅಲ್ಲದೇ ವಿಜಯ ಗೋಪಾಲ ಬಂಗೇರರ ‘ನೆನಪಿನಂಗಳದಿಂದ’ ಕೃತಿಯನ್ನು ಬಿಡುಗಡೆಗೊಳಿಸಲಾಗು ವುದು. ಇದರೊಂದಿಗೆ ಜಾನಪದ ಪರಿಷತ್ತಿನ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಘಟಕಗಳ ಪದಗ್ರಹಣವೂ ನಡೆಯಲಿದೆ ಎಂದವರು ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಡಿನ ಖ್ಯಾತ ಜಾನಪದ ಸಂಶೋಧಕ, ಸಾಹಿತಿ, ಜಾನಪದ ವಸ್ತು ಸಂಗ್ರಾಹಕ ಎಚ್.ಎಲ್.ನಾಗೇಗೌಡ ಅವರಿಂದ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು ಸಮಾರಂಭ ವನ್ನು ಉದ್ಘಾಟಿಸಲಿದ್ದು, ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಎಸ್.ಅಂಗಾರ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಗರಸಭಾ ಸದಸ್ಯ ರಮೇಶ್ ಕಾಂಚನ್, ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಲಯನ್ ಗವರ್ನರ್ ಡಾ.ಎಂ.ಕೆ.ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ಜಾನಪದ ಸಂಶೋಧಕ ಹಾಗೂ ಪ್ರಾಧ್ಯಾಪಕ ಡಾ.ಎಸ್.ಆರ್. ಅರುಣ್‌ಕುಮಾರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಮೊದಲು ಅಪರಾಹ್ನ ೨:೩೦ರಿಂದ ಜೋಡುಕಟ್ಟೆಯಿಂದ ವೈಭವದ ಮೆರವಣಿಗೆ ನಡೆಯಲಿದ್ದು, ಬಳಿಕ ವೇದಿಕೆಯಲ್ಲಿ ನಾಡಿನ ನಾನಾ ಭಾಗಗಳಿಂದ ಬರುವ ಕಲಾವಿದರಿಂದ ಬೀಸು ಕಂಸಾಳೆ, ಪೂಜಾ ಕುಣಿತ, ಡೊಳ್ಳು ಕುಣಿತ, ಗೋಂದೋಳು, ಹೌಂದ್ರಾಯನ ವಾಲಗ, ಕುಣಿತ ಭಜನೆ, ಕಂಗೀಲು ನೃತ್ಯ, ಕರಗ ಕೋಲಾಟ, ಜಾನಪದ ವಾದ್ಯ ಮಂಜರಿ ಹಾಗೂ ಕೊಳಲು ವಾದನ ಪ್ರದರ್ಶನವಿದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಿ.ಶ್ರೀಧರ ಶೇಣವ, ಕಾರ್ಯದರ್ಶಿ ರವಿರಾಜ ನಾಯಕ್ ಹಾಗೂ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಹೆಗ್ಡೆ ಉಪಸ್ಥಿತರಿದ್ದರು.







