ಶಿಕ್ಷಣ ಸಚಿವ ನಾಗೇಶ್ ವಜಾಕ್ಕೆ ಸಿಪಿಎಂ ಆಗ್ರಹ
ಮಂಗಳೂರು : ಕೆಲವು ಪಠ್ಯಗಳಲ್ಲಿರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ರಚಿಸಲಾದ ರೋಹಿತ್ ಚಕ್ರವರ್ತಿ ನೇತೃತ್ವದ ಸಮಿತಿಯುತನಗೆ ವಹಿಸಿದ ಜವಾಬ್ದಾರಿಯನ್ನು ಮೀರಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾದ ದುಷ್ಕೃತ್ಯವನ್ನು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ.
ಈ ಸರಕಾರದಲ್ಲಿ ಯಾರು, ಹೇಗೆ ಬೇಕಾದರೂ ವರ್ತಿಸಬಹುದೆಂಬುದನ್ನು ಮತ್ತು ಆಡಳಿತದ ಮೇಲೆ ಸರಕಾರದ ಯಾವುದೇ ನಿಯಂತ್ರಣ ಇಲ್ಲವೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ಯಾವುದೇ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೆ ಸೂಕ್ತ ಆದೇಶ ಹೊರಡಿಸದೆ ತಮಗೆ ತಿಳಿದಂತೆ ಕಾರ್ಯನಿರ್ವಹಿಸುವುದು ಖಂಡನೀಯ.
ರಾಜ್ಯದ ಲಕ್ಷಾಂತರ ಶಾಲಾ ಮಕ್ಕಳು ಪಠ್ಯ ಪುಸ್ತಕ ಲಭ್ಯವಿಲ್ಲದೆ ಶೈಕ್ಷಣಿಕವಾಗಿ ಈ ವರ್ಷವೂ ತೊಂದರೆಗೀಡಾಗಿದ್ದಾರೆ. ಅಲ್ಲದೆ ರಾಜ್ಯದ ಬೊಕ್ಕಸದ ನೂರಾರು ಕೋ.ರೂ.ಗಳ ಮೊತ್ತ ದುರ್ವಿನಿಯೋಗವಾಗಿರು ವುದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಸಚಿವ ನಾಗೇಶ್‌ರನ್ನು ತಕ್ಷಣ ಮುಖ್ಯಮಂತ್ರಿ ವಜಾ ಮಾಡಬೇಕು ಮತ್ತು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಒತ್ತಾಯಿಸಿದ್ದಾರೆ.