ಮೂಳೂರು ಸೈಟ್‌ನಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸಂತ್ರಸ್ತರ ಪ್ರತಿಭಟನೆ

ಮಂಗಳೂರು : ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಸೈಟ್ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಿದ ತ್ಯಾಜ್ಯ ಘಟಕಕ್ಕೆ ಎರಡು ವರ್ಷಗಳ ಹಿಂದೆ ಗುಡ್ಡೆ ಜರಿತದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಗ್ರಾಪಂ ವತಿಯಿಂದ ಸೈಟ್ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಜಾಗ ಸಮತಟ್ಟು ಕಾರ್ಯ ನಡೆಯುದ್ದಾಗ, ಸ್ಥಳಕ್ಕೆ ಆಗಮಿಸಿದ ಕೆಲವು ಮಹಿಳೆಯರ ಸಹಿತ ೧೦ಕ್ಕೂ ಹೆಚ್ಚು ಮಂದಿ ಸಂತ್ರಸ್ತರು, ‘ಇದುವರೆಗೂ ನಮಗೆ ಮನೆ ನಿರ್ಮಿಸಲು ನಿವೇಶನ ಹಂಚಿಕೆ ಮಾಡದ ಸರಕಾರ ಅಥವಾ ಗ್ರಾಪಂ ಆಡಳಿತವು ತರಾತುರಿಯಲ್ಲಿ ನಾವಿದ್ದ ಜಾಗದಲ್ಲಿ ತ್ಯಾಜ್ಯ ಘಟಕ ಸ್ಥಾಪಿಸಲು ಮುಂದಾಗಿದೆ. ಮೊದಲು ನಮಗೆ ನಿವೇಶನ ನೀಡಿ, ಆಮೇಲೆ ತ್ಯಾಜ್ಯ ಘಟಕ ಸ್ಥಾಪಿಸಿ ಎಂದು ಆಗ್ರಹಿಸಿ ತ್ಯಾಜ್ಯ ಘಟಕಕ್ಕೆ ಜಾಗ ಸಮತಟ್ಟುಗೊಳಿಸುತ್ತಿದ್ದ ಜೆಸಿಬಿಗೆ ತಡೆಯೊಡ್ಡಿದರು.
ಗುಡ್ಡೆ ಜರಿತದ ಬಳಿಕ ಸಂತ್ರಸ್ತರಾಗಿರುವ ಏಳೆಂಟು ಕುಟುಂಬಗಳಿಗೆ ಗಂಜಿಮಠ ಗ್ರಾಪಂ ವ್ಯಾಪ್ತಿಯ ಮೊಗರು ಗ್ರಾಮದಲ್ಲಿ ನಿವೇಶನ ಗುರುತಿಸಲಾಗಿದೆ. ಆ ಬಗ್ಗೆ ಕಂದಾಯ ಇಲಾಖೆ, ಜಿಲ್ಲಾಡಳಿತದ ಮೇಲೆ ಒತ್ತಡ ತರಬೇಕಾಗುತ್ತದೆ. ಇಲ್ಲಿ ತ್ಯಾಜ್ಯ ಘಟಕ ಸ್ಥಾಪನೆಯಾಗದಿದ್ದರೆ ಪಂಚಾಯತ್ ಬೇರೆ ಜಾಗ ಗುರುತಿಸಬೇಕಾಗು ತ್ತದೆ. ಮೂಳೂರು ಗ್ರಾಮದ ಅಲೈಗುಡ್ಡೆಯಲ್ಲಿ ಹಸಿ ಮತ್ತು ಒಣ ಕಸ ವಿಲೇವಾರಿ ಘಟಕ ಹೊಂದಿದೆ. ಇದೀಗ ಉಳಿಕೆ ಕಸ ವಿಂಗಡಣೆ ಮಾಡಲು ಮೂಳೂರು ಸೈಟ್‌ನ ಸರ್ವೇ ನಂಬ್ರ ೧೩೩ರಲ್ಲಿ ಹೆಚ್ಚುವರಿ ಘಟಕ ಸ್ಥಾಪಿಸಲು ಜಾಗ ಸಮತಟ್ಟು ಮಾಡುತ್ತಿದ್ದಾಗ ಸಂತ್ರಸ್ತ ಕುಟುಂಬಿಕರು ‘ತಮಗೆ ಮೊದಲು ನಿವೇಶನ ಕೊಡಿ, ಬಳಿಕ ತ್ಯಾಜ್ಯ ಘಟಕ ಸ್ಥಾಪಿಸಿ’ ಎಂದು ಆಗ್ರಹಿಸಿ ಜಾಗ ಸಮತಟ್ಟು ಕಾರ್ಯಕ್ಕೆ ತಡೆಯೊಡ್ಡಿದ್ದಾರೆ. ಹಾಗಾಗಿ ಸಮತಟ್ಟು ಕಾರ್ಯ ನಿಲ್ಲಿಸಲಾಗಿದೆ’ ಎಂದು ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ತಿಳಿಸಿದರು.
ಮೂಳೂರು ಸೈಟ್‌ನಲ್ಲಿ ಗುಡ್ಡೆ ಜರಿತದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಅಧಿಕೃತವಾಗಿ ನಿವೇಶನ ಹಂಚಿಕೆಯಾಗದ ಹೊರತು, ಸರ್ವೇ ನಂಬ್ರ ೧೩೩ರಲ್ಲಿ ಯಾವುದೇ ಕಟ್ಟಡ ರಚನೆಗೆ ಅವಕಾಶ ನೀಡುವುದಿಲ್ಲ. ತ್ಯಾಜ್ಯ ಘಟಕ ನಿರ್ಮಾಣದ ಬಗ್ಗೆ ಗ್ರಾಪಂ ಸಭೆಯಲ್ಲಿ ಚರ್ಚಿಸಿಲ್ಲ ಎಂದು ಗುರುಪುರ ಗ್ರಾಪಂ ಸದಸ್ಯರಾದ ಸಚಿನ್ ಅಡಪ ಮತ್ತು ರಾಜೇಶ್ ಸುವರ್ಣ ಆರೋಪಿಸಿದರು.
ಗುಡ್ಡೆ ಜರಿದ ಮೂಳೂರು ಸೈಟ್ ಪ್ರದೇಶ ರೆಡ್ ರೆನ್ ಆಗಿದ್ದರೆ, ಅದರ ಪಕ್ಕದ ಜಾಗ ಯೆಲ್ಲೋ ರೆನ್ ಎಂದು ಹಿಂದಿನ ಸಭೆಯಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ತಹಶೀಲ್ದಾರ್ ನಿರ್ದೇಶನದ ಅನ್ವಯ ಇಲ್ಲಿನ ಸುಮಾರು ೭೦ ಮನೆಗಳಿಗೆ ಪುನರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಎನ್‌ಒಸಿ ನೀಡಿದೆ.
ಈ ಮಧ್ಯೆ ಗುಡ್ಡೆ ಜರಿತದಿಂದ ಮನೆ ಮಣ್ಣುಪಾಲಾದ ಏಳು ಕುಟುಂಬಗಳಿಗೆ ಗಂಜಿಮಠ ಗ್ರಾಮದ ಮೊಗರುವಿನಲ್ಲಿ ೩.೭೧ ಎಕರೆ ಜಾಗ ಗುರುತಿಸಲಾಗಿದೆ. ಫಲಾನುಭವಿಗಳಿಗೆ ಈ ನಿವೇಶನ ಹಂಚಿಕೆ ಮಾಡುವಲ್ಲಿ ಕಂದಾಯ ಇಲಾಖೆ ಇದುವರೆಗೂ ನೈಜ ಆಸಕ್ತಿ ತೋರಿಸಿಲ್ಲ. ಹಾಗಾಗಿ ಕಳೆದ ಎರಡು ವರ್ಷದಿಂದ ಅಹವಾಲು ಹಿಡಿದುಕೊಂಡು ಡೀಸಿಯ ಗ್ರಾಮವಾಸ್ತವ್ಯ ಸಹಿತ ಸರಕಾರಿ ಕಚೇರಿಗಳು, ರಾಜಕಾರಣಿಗಳ ಬಳಿ ಅಲೆದಾಡುತ್ತಲೇ ಇದ್ದೇವೆ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.