ಸಿಇಟಿ: ಉಡುಪಿಯಲ್ಲಿ ಶಾಂತಿಯುತವಾಗಿ ನಡೆದ ಮೊದಲ ದಿನದ ಪರೀಕ್ಷೆ
ಜೀವಶಾಸ್ತ್ರಕ್ಕೆ 1818, ಗಣಿತ ಶಾಸ್ತ್ರಕ್ಕೆ 128 ಮಂದಿ ಗೈರು
ಉಡುಪಿ : ಉಡುಪಿಯ ಆರು, ಕುಂದಾಪುರ ಮತ್ತು ಕಾರ್ಕಳದ ತಲಾ ಎರಡು ಕೇಂದ್ರ ಸೇರಿದಂತೆ ಜಿಲ್ಲೆಯ 10 ಕೇಂದ್ರಗಳಲ್ಲಿ ಇಂದು ನಡೆದ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಮೊದಲ ದಿನದ ಎರಡು ಪರೀಕ್ಷೆಗಳು ಶಾಂತಿಯುತವಾಗಿ ನಡೆದಿದೆ.
ಜಿಲ್ಲೆಯ ಯಾವುದೇ ಕೇಂದ್ರದಿಂದಲೂ ಯಾವುದೇ ಅಹಿತಕರ ಘಟನೆಗಳ ವರದಿ ಬಂದಿಲ್ಲ. ವಿದ್ಯಾರ್ಥಿಗಳು ಉತ್ಸಾಹದಿಂದಲೇ ಪರೀಕ್ಷೆಯನ್ನು ಬರೆದರು ಎಂದು ಜಿಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ತಿಳಿಸಿದ್ದಾರೆ.
ಮೊದಲ ದಿನದಂದು ಬೆಳಗ್ಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ ಒಟ್ಟು ೪೭೦೯ ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದು, ಇವರಲ್ಲಿ ೨೮೯೧ ಮಂದಿ ಪರೀಕ್ಷೆಗೆ ಹಾಜರಾಗಿ ೧೮೧೮ ಮಂದಿ (೧೧೪೮+೬೭೦) ಗೈರುಹಾಜರಾಗಿದ್ದಾರೆ. ೨೨೮೪ ಮಂದಿ ಬಾಲಕರಲ್ಲಿ ೧೧೩೬ ಮಂದಿ ಹಾಗೂ ೨೪೨೫ ಮಂದಿ ಬಾಲಕಿಯರಲ್ಲಿ ೧೭೫೫ ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಅಪರಾಹ್ನ ನಡೆದ ಗಣಿತ ಶಾಸ್ತ್ರ ಪರೀಕ್ಷೆಗೆ ೪೭೦೯ ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ ೪೫೮೧ ಮಂದಿ ಪರೀಕ್ಷೆ ಬರೆದು ೧೨೮ ಮಂದಿ (೪೧+೮೭) ಗೈರುಹಾಜರಾಗಿದ್ದಾರೆ. ೨೨೯೪ ಮಂದಿ ಬಾಲಕರಲ್ಲಿ ೨೨೫೩ ಮಂದಿ ಹಾಗೂ ೨೪೧೫ ಮಂದಿ ಬಾಲಕಿಯರಲ್ಲಿ ೨೩೨೮ ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಎರಡನೇ ದಿನವಾದ ನಾಳೆ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.





