ಜಲಮೂಲಗಳ ಜಿಯೋಟ್ಯಾಗಿಂಗ್‌ಗೆ ಪಿಯೂಷ್ ರಂಜನ್ ಸೂಚನೆ

ಮಂಗಳೂರು : ಜಿಲ್ಲೆಯಲ್ಲಿರುವ ಎಲ್ಲಾ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆ ಜಲ ಮೂಲಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸುವಂತೆ ಕೇಂದ್ರ ರಕ್ಷಣಾ ಸಚಿವಾಲಯದ ನಿರ್ದೇಶಕ ಹಾಗೂ ಜಲಶಕ್ತಿ ಅಭಿಯಾನ ಕೇಂದ್ರದ ನೋಡಲ್ ಅಧಿಕಾರಿ ಪಿಯೂಷ್ ರಂಜನ್ ಸೂಚನೆ ನೀಡಿದರು.
ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿ ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ಮಿನಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಶಕ್ತಿ ಅಭಿಯಾನದಲ್ಲಿ ಎಲ್ಲಾ ಜಲಮೂಲಗಳನ್ನು ಗುರುತಿಸಿ, ಅವುಗಳ ಸಂರಕ್ಷಣಾ ಕಾರ್ಯ ಕೈಗೊಳ್ಳಲಾಗು ತ್ತಿದೆ. ಅದರಲ್ಲಿ ಮಳೆ ನೀರು ಕೊಯ್ಲು ಮಹತ್ವದ ಪಾತ್ರ ವಹಿಸಿದ್ದು, ಮಳೆ ಎಲ್ಲಿ, ಯಾವ ಜಾಗದಲ್ಲಿ ಬೀಳುತ್ತ ದೆಯೋ ಆ ನೀರನ್ನು ಹಿಡಿದಿಡುವ ಉದ್ದೇಶವು ಜಲಶಕ್ತಿ ಅಭಿಯಾನದ್ದಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಪ್ರಸಕ್ತ ಇರುವ ಎಲ್ಲಾ ಜಲ ಮೂಲಗಳನ್ನು ಜೀಯೋಟ್ಯಾಂಗಿಗ್‌ಗೆ ಒಳಪಡಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಜಲಶಕ್ತಿ ಕೇಂದ್ರವೊಂದನ್ನು ಸ್ಥಾಪಿಸುವಂತೆ ಸಲಹೆ ನೀಡಿದ ಅವರು ಸಂಪೂರ್ಣವಾಗಿ ಜಿಲ್ಲೆಯ ಜಲ ಸಂರಕ್ಷಣಾ ಯೋಜನೆಯನ್ನು ರೂಪಿಸುವಂತೆ ಪಿಯೂಷ್ ರಂಜನ್ ನಿರ್ದೇಶನ ನೀಡಿದರು.
ಅಮೃತ ಸರೋವರ ಯೋಜನೆಯಡಿ ಒಂದು ಎಕರೆ ಪ್ರದೇಶದೊಳಗೆ ಲಭ್ಯವಿರುವ ಜಲ ಮೂಲಗಳನ್ನು ಪುನರುಜ್ಜೀವನಗೊಳಿಸುವಂತೆ ಅಥವಾ ಸಾಧ್ಯವಿದ್ದರೆ ಹೊಸ ಜಲಮೂಲಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ನೆಹರೂಯುವ ಕೇಂದ್ರದ ವ್ಯಾಪ್ತಿಯ ಯುವ ಕ್ಲಬ್‌ಗಳ ಮೂಲಕ ಜಲಸಂರಕ್ಷಣೆಯ ಬಗ್ಗೆ ಜನ ಸಮುದಾಯದಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಜಲಮೂಲ ಗಳನ್ನು ಸಂರಕ್ಷಿಸಿದ ಕಾರ್ಯಗಳ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ವೆಬ್ ಪೋರ್ಟಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವಂತೆ ಪಿಯೂಷ್ ರಂಜನ್ ಸಲಹೆ ನೀಡಿದರು.
ದ.ಕ.ಜಿಪಂ ಸಿಇಒ ಡಾ.ಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲಾ ಜಲಮೂಲಗಳ ರಕ್ಷಣೆಗೆ ಜಿಯೋಟ್ಯಾಗಿಂಗ್ ಯೋಜನೆ ರೂಪಿಸಲಾಗುವುದು. ಅಮೃತ ಸರೋವರ ಯೋಜನೆಯಡಿ ೧೫ ಜಲ ಮೂಲಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದರು.
ಜಲಶಕ್ತಿ ಅಭಿಯಾನದ ತಾಂತ್ರಿಕ ಅಧಿಕಾರಿಡಾ.ಎಲ್.ಎಂ. ಠಾಕೂರ್ ಮಾತನಾಡಿದರು. ಸಭೆಯಲ್ಲಿ ದ.ಕ.ಜಿಪಂ ಉಪ ಕಾರ್ಯದರ್ಶಿ ಆನಂದ್ ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತಿತರರು ಪಾಲ್ಗೊಂಡಿದ್ದರು.