ಭಟ್ಕಳ: ಟ್ಯಾಕ್ಸಿ ಚಾಲಕನ ಮೇಲೆ ಪಿಎಸ್‌ಐ ಹಲ್ಲೆ ಆರೋಪ; ಕ್ರಮಕ್ಕೆ ಒತ್ತಾಯಿಸಿ ಡಿವೈಎಸ್ಪಿಗೆ ಮನವಿ

ಭಟ್ಕಳ: ಕುಮಟಾದ ಟ್ಯಾಕ್ಸಿ ಚಾಲಕನ ಮೇಲೆ ಮಂಕಿ ಪಿಎಸ್‌ಐ ವಿನಾಕಾರಣ ಹಲ್ಲೆ ನಡೆಸಿ, 8 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಡಿ.ವೈ.ಎಸ್ಪಿಯನ್ನು ಭೇಟಿಯಾಗಿರುವ ಟ್ಯಾಕ್ಸಿ ಚಾಲಕರ ಸಂಘ ಮಂಕಿ ಪಿ.ಎಸ್.ಐ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಕಮಟಾದ ಟ್ಯಾಕ್ಸಿ ಚಾಲಕ ಗಣಪತಿ ಹರೀಶ್ ನಾಯ್ಕ ಕುಮಟಾದಿಂದ ಪ್ರಯಾಣಿಕರನ್ನು ಕರೆದೊಯ್ದಿದ್ದು, ಈ ವೇಳೆ ಅನಂತವಾಡಿ ಚೆಕ್ ಪೋಸ್ಟ್ (ರಾಷ್ಟ್ರೀಯ ಹೆದ್ದಾರಿ ೬೬) ಕಾರನ್ನು ತಡೆದು ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿರುವ ಅಲ್ಲಿನ ಪಿ.ಎಸ್.ಐ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಹೆದ್ದಾರಿಯಲ್ಲಿ ರಾತ್ರಿ ವೇಳೆ ಕೈ ಮಾಡಿ ವಾಹನ ತಡೆಯಲು ಸೂಚಿಸಿದ್ದು ಸ್ವಲ್ಪ ಮುಂದೆ ಬಂದು ವಾಹನ ನಿಲ್ಲಿಸಿದ್ದರಿಂದ ಕೋಪಗೊಂಡ ಪಿ.ಎಸ್.ಐ ನನಗೆ ಬಾಯಿಗೆ ಬಂದಂತೆ ಬೈಯ್ದು ಹಲ್ಲೆ ಮಾಡಿದ್ದಾರೆ. ದಂಡ ರೂಪವಾಗಿ 8 ಸಾವಿರ ಕಟ್ಟುವಂತೆ ಬೇಡಿಕೆಯನ್ನು ಇಟ್ಟಿದ್ದಾರೆ. ನಾನು ಕೋರ್ಟ್ ನಲ್ಲಿ ದಂಡ ಕಟ್ಟುವೆ ಎಂದು ಹೇಳಿದಾಗ ಪ್ರಯಾಣಿಕರ ಎದುರೇ ನನ್ನ ಕೆನ್ನೆಗೆ ಹೊಡೆದು ನನ್ನನ್ನು ಅಪಮಾನಿಸಿ ನಿಂದಿಸಿದ್ದಾರೆ ಎಂದು ಡಿ.ವೈ.ಎಸ್.ಪಿಯವರಿಗೆ ನೀಡಿದ ಮನವಿ ಪತ್ರದಲ್ಲಿ ಟ್ಯಾಕ್ಸಿ ಚಾಲಕ ಗಣಪತಿ ನಾಯ್ಕ ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಾಲಕ ಗಣಪತಿ ಟ್ಯಾಕ್ಸಿ ಚಾಲಕರ ಸಂಘಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ನವೀನ್ ನಾಯ್ಕ್ ನೇತೃತ್ವದಲ್ಲಿ ಹಲವು ಚಾಲಕರು ಭಟ್ಕಳ ಡಿವೈಎಸ್ಪಿ ಕಚೇರಿಗೆ ಧಾವಿಸಿ ಸಂಬಂಧಪಟ್ಟ ಪಿಎಸ್ಐ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಈ ಸಂದರ್ಭ ಸಂಘಟನೆಯ ಭಟ್ಕಳ ತಾಲೂಕಾ ಅಧ್ಯಕ್ಷ ಫೈಸಲ್ ಸೇರಿದಂತೆ ಮೋಹನ್, ಅಬ್ದುಲ್ ಮಜೀದ್, ರಂಜನ್, ಸಂದೀಪ್, ಕರಣ್, ಅಬ್ದುಲ್ ಅಲೀಂ, ಬಾಷಾ, ಪ್ರಶಾಂತ್, ಶ್ರೀಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







