ಪತ್ರಕರ್ತ ಗುರುವಪ್ಪ ಬಾಳೇಪುಣಿಯವರಿಗೆ ವಿ.ಎಸ್.ಕೆ. ಮಾಧ್ಯಮ ಪ್ರಶಸ್ತಿ

ಮಂಗಳೂರು, ಜೂ.17: ಮಾಧ್ಯಮ ಸಂವಹನ ಸಂಸ್ಥೆಯಾದ ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ನೀಡಲಾಗುವ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, `ಹೊಸ ದಿಗಂತ' ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಅವರು ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿ.ಎಸ್.ಕೆ.ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜೂ.26ರಂದು ಪೂರ್ವಾಹ್ನ 10:30ಕ್ಕೆ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಬಾಳೇಪುಣಿಯವರಿಗೆ ಇತ್ತೀಚೆಗಷ್ಟೇ ರಾಜ್ಯ ಸರಕಾರ ರಾಜ್ಯ ಮಟ್ಟದ ಪ್ರತಿಷ್ಠಿತ `ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ' ನೀಡಿ ಗೌರವಿಸಿತ್ತು. ಹೊಸದಿಗಂತ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಾಳೇಪುಣಿ, ಪತ್ರಿಕೋದ್ಯಮದಲ್ಲಿ ಒಟ್ಟು 36 ವರ್ಷಗಳ ಅನುಭವ ಹೊಂದಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೆಸರು ಗಳಿಸಿರುವ ಅವರು, ಹಲವಾರು ಮಂದಿ ಎಲೆಮರೆಕಾಯಿಯಂತಿದ್ದ ಸಾಧಕರನ್ನು ಹೊಸ ದಿಗಂತ ಮೂಲಕ ಬೆಳಕಿಗೆ ತಂದು ಅವರಿಗೆ ಪ್ರಶಸ್ತಿ ದೊರಕಲು ಕಾರಣರಾಗಿದ್ದಾರೆ. ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಹೊಸ ದಿಗಂತದ ಮೂಲಕ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬಾಳೇಪುಣಿ ಅವರಿಗೆ ಸಲ್ಲುತ್ತದೆ.
ಬಾಳೇಪುಣಿ ಅವರಿಗೆ ಈ ಹಿಂದೆ 2011ರಲ್ಲಿ ರಾಷ್ಟ್ರಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ, 2004ರಲ್ಲಿ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, 2014ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಕಾಂತಾವರ ಪುರಸ್ಕಾರ ದೊರೆತಿದೆ.





