ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು, ಜೂ.17: ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡುವ ಭರದಲ್ಲಿ 'ತಾವು ಸದಾ ಅಸ್ಪೃಶ್ಯರು' ಎಂದು ಉಲ್ಲೇಖಿಸಿ ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಈ ಬಗ್ಗೆ ಪೊಲೀಸ್ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಎಸ್.ಸಿ. ಮೋರ್ಚಾ ವತಿಯಿಂದ ಇಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಲಾಗಿದೆ. ಸಿದ್ದರಾಮಯ್ಯ ತನಗೆ ಜಾತಿ ನಿಂದನೆ ಮಾಡಿದ್ದು, ಎಫ್‍ಐಆರ್ ಮಾಡಿ ಬಂಧಿಸಲು ಒತ್ತಾಯಿಸಿದ್ದೇನೆ. ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಧರಣಿ ಮಾಡುವುದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯರ ಬಗ್ಗೆ ತನಗೆ ಬಹಳ ಗೌರವವಿದೆ. ಆದರೆ, ಅವರ ರಾಜಕೀಯ ಜಿದ್ದಾಜಿದ್ದಿ ವಿಚಾರದಲ್ಲಿ ನಮ್ಮ ಆಕ್ಷೇಪವಿದೆ ಎಂದ ಛಲವಾದಿ ನಾರಾಯಣಸ್ವಾಮಿ, ನಮ್ಮನ್ನು ಗುಲಾಮರು, ಅಸ್ಪೃಶ್ಯರು ಕರೆದು ನಿಂದಿಸಿದ್ದಾರೆ. ಇಂಥ ನಿಂದನೆಯ ಅಧಿಕಾರ ಅವರಿಗೆ ಇಲ್ಲ ಎಂದು ಹೇಳಿದರು.
ಇದು ಸಿದ್ದರಾಮಯ್ಯರ ದಲಿತ ವಿರೋಧಿ ಧೋರಣೆಗೆ ಸಾಕ್ಷಿ ಎಂದ ಅವರು, ದಲಿತ ಮಹಿಳೆ ಶ್ರೀಮತಿ ಮೋಟಮ್ಮ ತಮ್ಮ ಆತ್ಮಕಥೆ ಪುಸ್ತಕದಲ್ಲಿ ಸಿದ್ದರಾಮಯ್ಯನವರು ನನ್ನ ಎಲ್ಲ ಬೆಳವಣಿಗೆಗೂ ಬಾಗಿಲು ಹಾಕಿದರು ಎಂದು ಹೇಳಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಮನಸ್ಥಿತಿ ದಲಿತ ವಿರೋಧಿ ಎಂಬುದು ಸಿದ್ದರಾಮಯ್ಯರ ಮೂಲಕ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







