ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ: ಪೊಲೀಸರಿಂದ ತಡೆ
ಈಡಿ ದುರ್ಬಳಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಉಡುಪಿ : ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಕೇಸ್ ಮೂಲಕ ಇಡಿ ಸಂಸ್ಥೆಯ ದುರ್ಬಳಕ್ಕೆ ಹಾಗೂ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಪ್ರತಿಭಟನೆ ಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ತಡೆಹಿಡಿದರು.
ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಆಗಮಿಸಿದ್ದು, ಈ ವೇಳೆ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದ ಗೇಟಿನ ಎದುರು ನೆರೆದ ಪ್ರತಿಭಟನ ಕಾರರು, ಒಳನುಗ್ಗಲು ಪ್ರಯತ್ನಿಸಿದರು. ಆದರೆ ಪೊಲೀಸರು ಗೇಟು ಹಾಕಿ ಪ್ರತಿಭಟನಕಾರರು ಒಳ ಪ್ರವೇಶಿಸಿದಂತೆ ತಡೆದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು.
ವಿಪಕ್ಷಗಳ ಹತ್ತಿಕ್ಕುವ ಪ್ರಯತ್ನ
ಇದಕ್ಕೂ ಮುನ್ನ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಸರಕಾರ ನಡೆಸುತ್ತಿದ್ದು, ಇದರ ವಿರುದ್ಧ ಹೋರಾಟ ಅಗತ್ಯವಾಗಿದೆ. ರಾಷ್ಟ್ರಪತಿ ಚುನಾವಣೆ ಯಲ್ಲಿ ಗೆಲವು ಸಾಧಿಸಲು ಎನ್‌ಡಿಎಗೆ ಸಾಕಷ್ಟು ಮತಗಳಿಲ್ಲದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಮುರಿಯಲು ಸರಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಭ್ರಷ್ಟ ಬಿಜೆಪಿ ಸರಕಾರ ತನ್ನ ವೈಫಲ್ಯ ಮುಚ್ಚಿ ಹಾಕಲು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸಿ ದಾಳಿ ನಡೆಸುತ್ತಿದೆ ಹಾಗೂ ಮುಖಂಡರಿಗೆ ಕಿರುಕುಳ ನೀಡುತ್ತಿದೆ. ಅಲ್ಪಸಂಖ್ಯಾತ, ದಲಿತ ವಿರೋಧಿ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರಕಾರವನ್ನು ತೊಲಗಿಸುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ರೋಶಿನಿ ಒಲಿವೇರಾ, ಪ್ರಖ್ಯಾತ್ ಶೆಟ್ಟಿ, ದೀಪಕ್ ಕೋಟ್ಯಾನ್, ದಿನೇಶ್ ಪುತ್ರನ್, ಭುಜಂಗ ಶೆಟ್ಟಿ, ಗೀತಾ ವಾಗ್ಳೆ, ಮಲ್ಯಾಡಿ ಶಿವರಾಮ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಇಸ್ಮಾಯಿಲ್ ಆತ್ರಾಡಿ, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್, ಹಬೀಬ್ ಅಲಿ, ಹರೀಶ್ ಶೆಟ್ಟಿ ಪಾಂಗಾಳ, ಬಿ.ನರಸಿಂಹ ಮೂರ್ತಿ, ಬಿಪಿನ್ ಚಂದ್ರ ಪಾಲ್ ನಕ್ರೆ, ಹರೀಶ್ ಕಿಣಿ, ವಿಘ್ನೇಶ್ ಕಿಣಿ, ಸರಸು ಬಂಗೇರ ಮೊದಲಾದವರು ಉಪಸ್ಥಿತರಿದ್ದರು.