ಇ-ವೇ ಬಿಲ್ ರದ್ದುಪಡಿಸಿ: ಪೀಣ್ಯ ಕೈಗಾರಿಕಾ ಸಂಘ ಒತ್ತಾಯ

ಬೆಂಗಳೂರು, ಜೂ.17: ಕೈಗಾರಿಕಾ ವಲಯಕ್ಕೆ ತೊಂದರೆಯಾಗಿ ಪರಿಣಮಿಸಿರುವ ಇ-ವೇ ಬಿಲ್(ಸರಕುಗಳ ಸಾಗಾಟನೆಯ ಸಂದರ್ಭದಲ್ಲಿ ಅದರ ವಿವರಗಳೊಂದಿಗೆ ನಿಗದಿಪಡಿಸಿದ ವಿದ್ಯುನ್ಮಾನ ವ್ಯವಸ್ಥೆಯಲ್ಲಿ ದಾಖಲಿಸುವ ಕ್ರಮ)ಅನ್ನು ನಗರದ ಕೈಗಾರಿಕಾ ವಿಭಾಗಕ್ಕೆ ಅನ್ವಯವಾಗುವಂತೆ ರದ್ದುಪಡಿಸಬೇಕೆಂದು ಪೀಣ್ಯ ಕೈಗಾರಿಕಾ ಸಂಘ ಒತ್ತಾಯಿಸಿದೆ.
ನಗರದ ಪಿಐಎ ಆಡಿಟೋರಿಯಂನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ಜಾಬ್ ವರ್ಕ್ ಮತ್ತು ಇ-ವೇ ಬಿಲ್ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮನವಿ ಮಾಡಿದೆ.
ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ(ಜಾರಿ) ರಘುನಂದನ್ ಮೂರ್ತಿ ಮಾತನಾಡಿ, ಇ-ವೇ ಬಿಲ್‍ಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಕೈಗಾರಿಕಾ ವಲಯಕ್ಕೆ ಆಗುತ್ತಿರುವ ಕಿರುಕುಳವನ್ನು ಶೀಘ್ರ ನಿವಾರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇ-ವೇ ಬಿಲ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಾಗುವುದು. ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ಈ ವಲಯಕ್ಕೆ ಸಂಬಂಧಿಸಿದ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಹೇಳಿದರು.
ಪೀಣ್ಯಾ ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶಿವಕುಮಾರ್ ಆರ್. ಮಾತನಾಡಿ, ಜಿಎಸ್‍ಟಿ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮೂರು ತಿಂಗಳಿಗೊಮ್ಮೆ ಪೀಣ್ಯ ಕೈಗಾರಿಕಾ ಸಂಘದ ಆವರಣದಲ್ಲಿ ಜಿಎಸ್‍ಟಿ ಅದಾಲತ್ ಆಯೋಜಿಸಲು ಮನವಿ ಮಾಡಿದರು.
ಸಭೆಯಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ(ಜಾಗೃತಿ) ಬಸವರಾಜ್, ವಿಭಾಗೀಯ ಸರಕು ಮತ್ತು ಸೇವಾ ತೆರಿಗೆಗಳ ಕಚೇರಿಯ(ಆಡಳಿತ-6) ನಾಗಸ್ವಾಮಿ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮುರಳಿ ಕೃಷ್ಣ ಉಪಸ್ಥಿತರಿದ್ದರು.







