ಪುತ್ತೂರು: ಶಿಕ್ಷಕ ಶಿವಪ್ಪ ರಾಥೋಡ್ ರಿಂದ ಬಿಇಒ ಕಚೇರಿ ಮುಂದೆ ಧರಣಿ

ಪುತ್ತೂರು: ಸೇವಾ ವಿಚಾರದಲ್ಲಿ ತಾರತಮ್ಯ, ಸಮಾನತೆ ನೀಡದಿರುವುದು, ಕಡತ ವಿಲೇವಾರಿ ಮಾಡದೇ ಇರುವುದು ಸೇರಿದಂತೆ ಹಕ್ಕುಗಳ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಸರಕಾರಿ ಮತ್ತು ಅರೆ ಸರಕಾರಿ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿರುವ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಶಿಕ್ಷಕ ಶಿವಪ್ಪ ರಾಥೋಡ್ ಅವರು ನ್ಯಾಯ ಕೊಡುವಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಗುರುವಾರ ಬೆಳಗ್ಗಿನಿಂದ ಮೌನ ಧರಣಿ ಆರಂಭಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂದೆ ಚಾಪೆ ಹಾಕಿ ಕೂತು ಕೊಂಡು ಸಮಾನತೆ `ನನ್ನ ಹಕ್ಕು ನನ್ನ ನಡೆ' ಶೋಷಣೆ ವಿರುದ್ಧದ ಹಕ್ಕು ಘೋಷವಾಕ್ಯದ ಅಡಿಯಲ್ಲಿ ಮೌನ ಧರಣಿ ಆರಂಭಿಸಿದ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಯವರು ತಾರತಮ್ಯ ಮಾಡಿರುವುದರಿಂದ ನ್ಯಾಯ ಸಿಗುವತನಕ ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ನನ್ನ ಸೇವಾ ಅವಧಿಯಲ್ಲಿರುವ ವಿಚಾರಗಳನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಅಂಗವಿಕಲ ಹಕ್ಕುಗಳ 2016ರ ಕಾಯ್ದೆ ಪ್ರಕಾರ ಸಂವಿಧಾನ ಬದ್ಧವಾಗಿ ಸಾಮಾನ್ಯ ಅರ್ಜಿಗಳನ್ನು ಕಚೇರಿಗೆ ನೀಡಿದಾಗ ನನಗೆ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಹಾಗಾಗಿ ನಾನು ಸೇವಾ ಅವಧಿಯಲ್ಲಿರುವಾಗ ಮನವಿಗಳು ಮತ್ತು ನನಗೆ ತೊಂದರೆ ನೀಡಿದ ಸಿಬ್ಬಂದಿಗಳ ವಿರುದ್ಧ ದೂರು ನೀಡಿದಾಗಲೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಕ್ರಮ ವಹಿಸದಿದ್ದರಿಂದ ನಾನು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಹಾಕಿದ್ದೆ. ಆಗ ಕೆಲವೊಂದು ಅರ್ಜಿಗಳನ್ನು ವಿಲೇವಾರಿ ಮಾಡಿದ್ದರು. ಆದರೆ ಇನ್ನೂ ಕೆಲವು ಅರ್ಜಿಗಳನ್ನು ವಿಲೇವಾರಿ ಮಾಡದಾಗ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಯವರಲ್ಲಿ ಮೇಲ್ಮನವಿ ಸಲ್ಲಿಸಿದ್ದೆ. ಆದರೆ ಅದಕ್ಕೂ ಯಾವುದೇ ಸ್ಪಂದನೆ ಸಿಗದಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದ್ದೆ. ಆಗ ಅವರು ಒಂದು ಭಾರಿ ಸಭಾ ನಡವಾಳಿ ನಡೆಸಿ 15 ದಿನದೊಳಗೆ ಮಾಹಿತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಆದೇಶ ನೀಡಿದ್ದರು. ಆದರೂ ಕೂಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಂಗವಿಕಲರ ಹಕ್ಕುಗಳಿಗೆ ತೊಂದರೆ ನೀಡಿ. ನನ್ನನ್ನು ಸತಾಯಿಸಿದ್ದಾರೆ. ಇದರಿಂದ ನಾನು ಬೇಸತ್ತು ನನ್ನ ಸೇವಾವಧಿಯಲ್ಲಿರುವ ವಿಚಾರಗಳು ನನಗೆ ಸಿಗುವ ತನಕ ಮೌನ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.