ಅಂಚೆ ಇಲಾಖೆಯಲ್ಲಿ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ ಸೇವೆ ಲಭ್ಯ
ಉಡುಪಿ : ಭಾರತೀಯ ಅಂಚೆ ಇಲಾಖೆಯು ಜೂನ್ ೨೧ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗ ವಾಗಿ ವಿಶೇಷ ರೀತಿಯ ಕ್ಯಾನ್ಸಲೇಷನ್ ಸ್ಟಾಂಪ್ (ಸ್ಪೆಷಲ್ ಕ್ಯಾನ್ಸಲೇಷನ್ ಸ್ಟ್ಯಾಂಪ್ ಅಥವಾ ಅಂಚೆ ಚೀಟಿ ರದ್ದತಿ) ಅನ್ನು ಬಿಡುಗಡೆಗೊಳಿಸಲಿದ್ದು, ಈ ಸೇವೆಯು ದೇಶದ ಸುಮಾರು ೮೧೦ ಪ್ರಧಾನ ಅಂಚೆಕಚೇರಿಗಳಲ್ಲಿ ಅಂ.ರಾ.ಯೋಗ ದಿನದಂದು ಲಭ್ಯವಿದೆ.
ಉಡುಪಿ ಪ್ರಧಾನ ಅಂಚೆ ಕಚೇರಿ, ಮಣಿಪಾಲ ಪ್ರಧಾನ ಅಂಚೆ ಕಚೇರಿ ಹಾಗೂ ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ ಲಭ್ಯವಿದ್ದು, ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಗ್ರಾಹಕರು ಹಾಗೂ ಅಂಚೆ ಚೀಟಿ ಸಂಗ್ರಹಕಾರರು ತರುವ ಕವರ್ ಕಾರ್ಡ್ ಮೇಲೆ ಅಂತಾರಾಷ್ಟ್ರೀಯ ಯೋಗ ದಿನದ ಚಿತ್ರ ವಿನ್ಯಾಸ ಹಾಗೂ ಪ್ರಸ್ತುತ ಸಾಲಿನ ಘೋಷಣಾ ವಾಕ್ಯವಿರುವ ಮಾನವತೆಗಾಗಿ ಯೋಗ ಎಂಬ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್‌ನ್ನು ಮುದ್ರಿಸಿ ಕೊಡಲಾಗುವುದು.
ಅಂಚೆ ಚೀಟಿ ಸಂಗ್ರಹಕಾರರಾಗಲು ಅಂಚೆ ಇಲಾಖೆಯಲ್ಲಿ ಅವಕಾಶವಿದ್ದು, ಅಂಚೆ ಕಚೇರಿಗಳಲ್ಲಿ ೪೦೦ ರೂ. ಗಳನ್ನು ಪಾವತಿಸಿದಾಗ ಅದರಲ್ಲಿ ೨೦೦ ರೂ. ಅನ್ನು ಠೇವಣಿಯಾಗಿರಿಸಿಕೊಂಡು ಮತ್ತುಳಿದ ಹಣಕ್ಕೆ ಅಂಚೆ ಇಲಾಖೆಯಿಂದ ಬಿಡುಗಡೆಗೊಂಡ ಹೊಸ ಅಂಚೆ ಚೀಟಿಗಳು ಯಾವುದೇ ಶುಲ್ಕವಿಲ್ಲದೆ ಮನೆ ಬಾಗಿಲಿಗೆ ಬರುವಂತಹ ಫಿಲಾಟಲಿ ಡೆಪಾಸಿಟ್ ಖಾತೆ ಯೋಜನೆಯೂ ಸಹ ಅಂಚೆ ಕಚೇರಿಯಲ್ಲಿ ಲಭ್ಯವಿದೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್‌ಚಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.