ಉಡುಪಿ ಸಣ್ಣ ನೀರಾವರಿ ಇಲಾಖಾ ಸಹಾಯಕ ಇಂಜಿನಿಯರ್ ಮನೆ, ಕಚೇರಿಗೆ ಎಸಿಬಿ ದಾಳಿ
ಒಂದೂವರೆ ಕೆ.ಜಿ. ಬಂಗಾರ, 4 ಲಕ್ಷ ರೂ. ನಗದು, ಎರಡು ನಿವೇಶನಗಳು ಪತ್ತೆ

ಉಡುಪಿ, ಜೂ.೧೭: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಇಲಾಖೆ ಸಹಾಯಕ ಅಭಿಯಂತರ ಹರೀಶ್ (53) ಅವರ ಮನೆ ಹಾಗೂ ಕಚೇರಿ ಮೇಲೆ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.
ಎಸಿಬಿ ಮಂಗಳೂರು ಎಸ್ಪಿ ಸೈಮನ್ ನಿರ್ದೇಶನದಂತೆ ಬೆಳಂಬೆಳಗ್ಗೆ ಅಧಿಕಾರಿ ಗಳ ತಂಡ ಹರೀಶ್ ಅವರ ಕೊರಂಗ್ರಪಾಡಿಯಲ್ಲಿರುವ ಮನೆ ಹಾಗೂ ಅಂಬಲ ಪಾಡಿಯಲ್ಲಿರುವ ಕಚೇರಿಗೆ ದಾಳಿ ಮಾಡಿ, ಪರಿಶೀಲನೆ ಹಾಗೂ ಶೋಧ ಕಾರ್ಯ ನಡೆಸಿದರು. ರಾತ್ರಿ 8 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದ ತಂಡ, ಅಪಾರ ಮೌಲ್ಯದ ಚಿನ್ನಾಭರಣಗಳು, ಲಕ್ಷಾಂತರ ರೂ. ನಗದು, ಆಸ್ತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಕೊರಂಗ್ರಪಾಡಿಯ ಮನೆಯಲ್ಲಿ ಸುಮಾರು ಒಂದೂವರೆ ಕೆ.ಜಿ. ಮೌಲ್ಯದ ಚಿನ್ನಾಭರಣ, ೨೫೦ಗ್ರಾಂ ಬೆಳ್ಳಿ, ೪ಲಕ್ಷ ರೂ. ನಗದು, ಹಾವಂಜೆ ಹಾಗೂ ಬ್ರಹ್ಮಾವರದಲ್ಲಿ ಪತ್ನಿಯ ಹೆಸರಿನಲ್ಲಿರುವ ಎರಡು ನಿವೇಶನಗಳು, ಎರಡು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಹರೀಶ್ ಅವರ ಅಂಬಲಪಾಡಿಯಲ್ಲಿರುವ ಕಚೇರಿ ಯಲ್ಲೂ ತಂಡ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ಮೂಲತಃ ಉಡುಪಿಯವರಾದ ಇವರು ಕಳೆದ ೧೮ ವರ್ಷಗಳಿಂದ ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದು, ಆರಂಭದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ, ಅದರ ನಂತರ ಸಣ್ಣ ನೀರಾವರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ, ಪೊಲೀಸ್ ನಿರೀಕ್ಷಕರಾದ ಸತೀಶ್ ಜಿ.ಜೆ., ರಫಿಕ್ ಎಂ., ಸಿಬಂದಿ ಯತಿನ್ ಕುಮಾರ್, ಪ್ರಸನ್ನ ದೇವಾಡಿಗ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಅಬ್ದುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು, ರಮೇಶ್ ಭಂಡಾರಿ ಹಾಗೂ ಪ್ರತಿಮಾ ಭಾಗವಹಿಸಿದ್ದರು.








